ಬೆಂಗಳೂರು, ಮಾ.18, ನ್ಯೂಸ್ ಎಕ್ಸ್ ಪ್ರೆಸ್ : ನಾನು ಎರಡು ಬಾರಿ ಶಾಸಕನಾಗಿದ್ದೇನೆ. ಬಿಡಿಎಗೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಿಸಿದೆ. ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಆದರೆ, ಬಿಡಿಎಗೆ ನನ್ನನ್ನು ನೆಪಮಾತ್ರಕ್ಕೆ ಅಧ್ಯಕ್ಷನನ್ನಾಗಿ ಮಾಡಿ ನನ್ನ ಯಾವ ಮಾತುಗಳು ನಡೆಯದಂತಹ ವಾತಾವರಣ ನಿರ್ಮಿಸಿದ್ದು, ಆಡಳಿತ ವ್ಯವಸ್ಥೆಗೆ ನಿವೃತ್ತ ಐಎಎಸ್ ಅಧಿಕಾರಿ ಬಾಲಸು ಬ್ರಹ್ಮಣ್ಯಂ ನೇಮಿಸಿರುವುದರಿಂದ ನಾನೇಕೆ ಅಧ್ಯಕ್ಷನಾಗಿ ಮುಂದುವರೆಯಬೇಕೆಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ನನ್ನ ಯಾವ ಮಾತುಗಳು ಅಲ್ಲಿ ನಡೆಯುತ್ತಿಲ್ಲ. ನಾನು ಯಾವುದಾದರೂ ಕೆಲಸ ಹೇಳಿದರೆ ಬಾಲಸುಬ್ರಹ್ಮಣ್ಯಂ ಅವರಿಂದ ಮಾತು ಹೇಳಿಸಿ ಎಂದು ನನಗೇ ಹೇಳುತ್ತಾರೆ. ಹಾಗಿದ್ದ ಮೇಲೆ ನಾನು ಅಧ್ಯಕ್ಷನಾಗಿ ಏಕೆ ಮುಂದುವರೆಯಬೇಕು? ಬಾಲಸುಬ್ರಹ್ಮಣ್ಯಂ ಯಾರು, ಆತನ ಹಿನ್ನೆಲೆ ಏನು? ಆತನನ್ನು ಯಾರು ಇಲ್ಲಿಗೆ ನೇಮಿಸಿದರು? ಬಿಡಿಎಯಲ್ಲಿ ಆತನ ದರ್ಬಾರು ನಡೆಯುತ್ತಿದೆ. ಬಾಲಸುಬ್ರಹ್ಮಣ್ಯಂ ಅವರನ್ನು ಅಲ್ಲಿಗೆ ನೇಮಿಸಿದ್ದು ಯಾರು, ಯಾವ ಕಾರಣಕ್ಕಾಗಿ ಆತನನ್ನು ನೇಮಿಸಿದ್ದಾರೆ, ನಾನು ಏಕೆ ಅಧಿಕಾರದಲ್ಲಿರಬೇಕು ಎಂಬೆಲ್ಲ ಪ್ರಶ್ನೆಗಳಿಗೆ ನನಗೂ ಉತ್ತರ ಸಿಗಬೇಕು. ಸಾರ್ವಜನಿಕರು ಅಧ್ಯಕ್ಷರ ಬಳಿ ಬಂದು ನಿವೇಶನ ಕೇಳುತ್ತಾರೆ. ಖಾತೆ ಪತ್ರಗಳನ್ನು ಮಾಡಿಸಿಕೊಡುವಂತೆ ಕೇಳುತ್ತಾರೆ. ನನ್ನ ಯಾವ ಕೆಲಸಗಳೂ ಸಹ ನಡೆಯುತ್ತಿಲ್ಲ. ಬಾಲಸುಬ್ರಹ್ಮಣ್ಯಂ ಹವಾ ಜಾಸ್ತಿಯಾಗಿದೆ. ನಾನ ಯಾವುದೇ ಕೆಲಸ ಹೇಳಿದರೂ ಅವರಿಂದ ಒಂದು ಮಾತು ಹೇಳಿಸಿ ಎಂಬ ಸಬೂಬುಗಳು ಕೇಳಿ ಬರುತ್ತಿವೆ. ನಮ್ಮ ಈ ಎಲ್ಲ ಸಮಸ್ಯೆ ಬಗೆಹರಿಯಬೇಕು ಎಂದಿದ್ದಾರೆ.