ಶಿವಮೊಗ್ಗ, ಡಿ. 30 : ಜಿಲ್ಲೆಯ ಸಾಗರ ತಾಲೂಕು ಆನಂದಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 206ನಲ್ಲಿ ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಎರಡು ಪುರಾತತ್ವ ಇಲಾಖೆಗೆ ಸಂಬಂಧಪಟ್ಟ ಕಲ್ಲುಗಳು ದೊರೆತಿದ್ದು, ಇವುಗಳು ಮಿಥುನದ ಕಲ್ಲುಗಳು ಎಂದು ಗುರುತಿಸಲಾಗಿದೆ.
ಕೆಳದಿ ಕಾಲದ ಸಂದರ್ಭದಲ್ಲಿ ಕೆರೆ ಏರಿಗಳಲ್ಲಿ ಈ ಕಲ್ಲುಗಳನ್ನು ಬಳಸಲಾಗುತ್ತಿತ್ತು ಎಂದು ಶಿವಮೊಗ್ಗದ ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದ್ದು, ಈಗಾಗಲೇ ಸೊರಬ ತಾಲೂಕು ಉಳವಿಯ ಕೆರೆ ಮತ್ತು ಸಾಗರದ ಕೆಲ ಕೆರೆಗಳಲ್ಲಿ ಈ ಮಿಥುನದ ಕಲ್ಲುಗಳು ಕಂಡುಬರುತ್ತವೆ.
ರಾಷ್ಟೀಯ ಹೆದ್ದಾರಿಯಲ್ಲಿ ಕೆರೆಯ ಏರಿಯಲ್ಲಿ ಸಾಗಿ ಹೋಗಿರುವ ಈ ಕೆರೆ ಆನಂದಪುರದ ಕೆರೆಯಾಗಿದೆ. ಇಲ್ಲಿ ರಸ್ತೆ ಕಾಮಗಾರಿ ನಡೆಸುವಾಗ ಎರಡು ಕಲ್ಲುಗಳು ದೊರೆತಿವೆ.
ಇದರಲ್ಲಿ ಒಂದು ಕಲ್ಲು ಅರ್ಧ ತುಂಡಾಗಿವೆ. ಈ ಕುರಿತು ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ್ ನಾಯ್ಕ್ ಸ್ಪಷ್ಟಪಡಿಸಿದ್ದು, ಬೆಳೆಯ ಉತ್ಪಾದನೆ ಹೆಚ್ಚಾಗಲಿ ಎಂದು ಆಗಿನ ಕಾಲದಲ್ಲಿ ಕೆರೆ ಏರಿಯ ಮೇಲೆ ಈ ಕಲ್ಲುಗಳನ್ನು ಬಳಸಲಾಗುತ್ತಿತ್ತು. ಈ ಮಿಥುನ ಕಲ್ಲುಗಳು ಉತ್ಪಾದನೆಯ ಸಂಕೇತವಾಗಿವೆ ಎಂದು ತಿಳಿಸಿದ್ದಾರೆ.