ರಾಲೆಗಣ್ಸಿದ್ದಿ (ಮಹಾರಾಷ್ಟ್ರ): ಕೇಂದ್ರದಲ್ಲಿ ಲೋಕಪಾಲ್ ಹಾಗೂ ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಲು ಆಗ್ರಹಿಸಿ ಮತ್ತು ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಆರಂಭಿಸಿರುವ ಉಪವಾಸ ಸತ್ಯಾಗ್ರಹ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ.
ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ರಾಲೆಗಣ್ಸಿದ್ದಿಯಲ್ಲಿ ಗ್ರಾಮಸ್ಥರು ಇಂದು ಅಣ್ಣಾ ಅವರ ಸತ್ಯಾಗ್ರಹಕ್ಕೆ ಬೆಂಬಲವಾಗಿ ಅವರ ಹುಟ್ಟೂರಾದ ತಮ್ಮ ಗ್ರಾಮದಲ್ಲಿ ಬಂದ್ ಆಚರಿಸಿದರು.
ಲೋಕಪಾಲ್ ರಚನೆ ಮತ್ತು ಲೋಕಾಯುಕ್ತ ಕಾಯಿದೆ ಜಾರಿಗೆ ಕ್ರಮವಾಗಿ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಅಸಮಾಧಾನಗೊಂಡು ನಿನ್ನೆಯಿಂದ ಹಜಾರೆ ಅವರು ತಮ್ಮ ಸ್ವಗ್ರಾಮ ರಾಲೆಗಣ್ಸಿದ್ದಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.