ಚಾಮರಾಜನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪೋಷಣ ಅಭಿಯಾನದ ಅಡಿಯಲ್ಲಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ ಸ್ಮಾರ್ಟ್ಫೋನ್ ವಿತರಣೆ ಮಾಡಲಾಗುತ್ತಿದ್ದು, ಅಂಗನವಾಡಿಯ ಕಾರ್ಯನಿರ್ವಹಣೆ ಇನ್ನು ಡಿಜಿಟಲ್ ರೂಪ ಪಡೆದುಕೊಳ್ಳಲಿದೆ.
ಮಕ್ಕಳ ಕುಂಠಿತ ಬೆಳವಣಿಗೆ ಮತ್ತು ಅಪೌಷ್ಟಿಕತೆ ತಡೆಗಟ್ಟುವುದು ಹಾಗೂ ರಕ್ತಹೀನತೆ ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ತಗ್ಗಿಸುವುದು ‘ಪೋಷಣ ಅಭಿಯಾನ’ದ ಮುಖ್ಯ ಉದ್ದೇಶ. ಅಂಗನವಾಡಿಗಳ ಮೂಲಕ ಈ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಅಂಗನವಾಡಿಗೆ ಬರುವ ಮಕ್ಕಳು ಮತ್ತು ಗರ್ಭಿಣಿ/ಬಾಣಂತಿಯರ ಹಾಜರಾತಿ, ಸಮುದಾಯ ಆಧಾರಿತ ಚಟುವಟಿಕೆ, ಪೌಷ್ಟಿಕ ಆಹಾರ ವಿತರಣೆ, ಫಲಾನುಭವಿಗಳ ಸಮೀಕ್ಷೆಯ ಅಂಕಿ ಅಂಶ ಮತ್ತು ವಿವರಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕರಿಗೆ ಫೋನ್ ಗಳನ್ನು ನೀಡಲು ನಿರ್ಧರಿಸಿದ್ದು, ರಾಜ್ಯದಲ್ಲಿ ಮೊದಲ ಹಂತದಲ್ಲಿ ಚಾಮರಾಜನಗರ ಸೇರಿದಂತೆ ೧೯ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.
ಸ್ಮಾರ್ಟ್ಫೋನ್ ಜತೆಗೆ ಪವರ್ ಬ್ಯಾಂಕ್, ಮೆಮೋರಿ ಕಾರ್ಡ್, ಬ್ಯಾಕ್ ಕೇಸ್, ಡಸ್ಟ್ ಪ್ರೂಫ್ ಕೇಸ್, ಸ್ಕ್ರೀನ್ ಪ್ರೊಟೆಕ್ಟರ್ ಮತ್ತು ಹೆಡ್ ಸೆಟ್ ಗಳು ಕೂಡ ಇರಲಿವೆ. ದಿನಕ್ಕೆ ಒಂದು ಜಿಬಿ ಮೆಮೊರಿ ಸೌಲಭ್ಯವೂ ಇರಲಿದೆ ಎಂದು ಅವರು ಮಾಹಿತಿ ನೀಡಿದರು.
ಮಕ್ಕಳು, ಗರ್ಭಿಣಿ/ಬಾಣಂತಿಯರ ಹಾಜರಾತಿ, ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಅಂಗನವಾಡಿಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಇದುವರೆಗೂ ಪುಸ್ತಕದಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಮುಂದೆ, ಅಂಗನವಾಡಿ ಕಾರ್ಯಕರ್ತೆಯರು ಎಲ್ಲ ಮಾಹಿತಿಗಳನ್ನೂ ಪ್ರತಿ ದಿನ ಸ್ಮಾರ್ಟ್ಫೋನ್ನಲಿ ದಾಖಲು ಮಾಡಬೇಕಾಗುತ್ತದೆ. ಮೇಲ್ವಿಚಾರಕರು ಹಾಗೂ ಅಧಿಕಾರಿಗಳು ತಮ್ಮ ಫೋನ್, ಕಂಪ್ಯೂಟರ್ಗಳ ಮೂಲಕ ಮಾಹಿತಿಯನ್ನು ಪಡೆಯಬಹುದು. ಒಂದರ್ಥದಲ್ಲಿ ಅಂಗನವಾಡಿಯ ಮಾಹಿತಿಗಳು ಇನ್ನು ಅಂಗೈನಲ್ಲೇ ಲಭ್ಯವಾಗಲಿದೆ’ ಎಂದು ಬಸವರಾಜು ಅವರು ಮಾಹಿತಿ ನೀಡಿದರು.