ನವದೆಹಲಿ: ‘ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ನಮ್ಮ ಬೇಡಿಕೆಯನ್ನು ಕೇಂದ್ರ ಈಡೇರಿಸದಿದ್ದರೆ ಅದನ್ನು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ನಮಗೆ ಗೊತ್ತು’ ಎಂದು ಆಂಧ್ರ ಪ್ರದೇಶ ಸಿಎಂ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಮೋದಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
‘ರಾಜ್ಯಕ್ಕೆ ವಿಶೇಷ ಸ್ಥಾನಮಾನ ಪಡೆಯುವ ವಿಷಯವು ಈಗ ಆಂಧ್ರ ಪ್ರದೇಶದ ಜನರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಪ್ರಧಾನಿ ಮೋದಿ ಅವರು ಒಬ್ಬ ವ್ಯಕ್ತಿಯನ್ನು ನಿಂದಿಸಿ ದಾಳಿ ಮಾಡುವುದನ್ನು ನಿಲ್ಲಿಸಬೇಕು’ ಎಂದು ನಾಯ್ಡು ಗುಡುಗಿದರು.
ಪ್ರಧಾನಿ ಮೋದಿ ಅವರು ನಿನ್ನೆ ಭಾನುವಾರ ಆಂಧ್ರಕ್ಕೆ ಭೇಟಿ ನೀಡಿರುವುದನ್ನು ತೀವ್ರವಾಗಿ ಟೀಕಿಸಿದ ನಾಯ್ಡು, ‘ನಾವಿಲ್ಲಿಗೆ ಬಂದಿರುವುದು ಕೇಂದ್ರ ಸರಕಾರವನ್ನು ಪ್ರತಿಭಟಿಸಲು; ನಿನ್ನೆ ಪ್ರಧಾನಿಯವರು ಆಂಧ್ರ ಪ್ರದೇಶದ ಗುಂಟೂರಿಗೆ ಧರಣಿ ಸತ್ಯಾಗ್ರಹಕ್ಕೆ ಒಂದು ದಿನದ ಮೊದಲೇ ಭೇಟಿ ನೀಡಿದರು. ಹಾಗೆ ಮಾಡುವುದರ ಅಗತ್ಯವೇನಿತ್ತು ಎಂದು ನಾನು ಕೇಳುತ್ತೇನೆ’ ಎಂದು ನಾಯ್ಡು ಹೇಳಿದರು.
ಇದಕ್ಕೆ ಮೊದಲು ಚಂದ್ರಬಾಬು ನಾಯ್ಡು ಅವರು ಆಂಧ್ರ ಭವನದಲ್ಲಿ , ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಕೇಂದ್ರವನ್ನು ಆಗ್ರಹಿಸಲು ದಿನಪೂರ್ತಿ ನಿರಶನ ಸತ್ಯಾಗ್ರಹ ನಡೆಸಿದ್ದರು. ಇದಕ್ಕೆ ಮೊದಲು ನಾಯ್ಡು ಅವರು ರಾಜಘಾಟ್ನಲ್ಲಿ ಮಹಾತ್ಮಾ ಗಾಂಧಿಗೆ ನಮನ ಸಲ್ಲಿಸಿದರು.