ಮಂಡ್ಯ, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಜಿಲ್ಲೆಯಲ್ಲಿ ಅಂಬರೀಶ್ಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು. ಅಂಬಿ ಕುಟುಂಬಕ್ಕೆ ನಾನೇನು ಮಾಡಿದ್ದೇನೆ ಅನ್ನೋದನ್ನ ಅಂಬಿ ಸಮಾಧಿ ಮುಂದೆ ನಿಂತು ಕೇಳಲಿ ಎಂದು ಸಚಿವ ಸಿ.ಎಸ್. ಪುಟ್ಟರಾಜು ಸ್ವತಂತ್ರ ಅಭ್ಯರ್ಥಿ ಸುಮಲತಾಗೆ ಸವಾಲು ಹಾಕಿದ್ದಾರೆ. ಮಾಧ್ಯಮಗಳೆದುರು ಮಾತನಾಡಿದ ಪುಟ್ಟರಾಜು, ಸುಮಲತಾ ನನ್ನ ಆತ್ಮಾಭಿಮಾನದ ಪ್ರಶ್ನೆ ಮಾಡೋದು ಬೇಡ. ಅಂಬರೀಶ್ ರಾಮನಗರದಲ್ಲಿ ಸೋತ ಬಳಿಕ ಮಂಡ್ಯಕ್ಕೆ ಕರೆತಂದಿದ್ದು ನಾನು. ನನ್ನ ಮನೆ ದುಡ್ಡು ಹಾಕಿ ಪ್ರಚಾರ ಮಾಡಿದ್ದೆ. ಅವರ ರಾಜಕೀಯ ಏಳಿಗೆಗಾಗಿ ಶ್ರಮಿಸಿದವನು ನಾನು. ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ತಾನೇ ಎಂದರು. ನಿನ್ನೆ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಹೀಗಾಗಿ ಬಿಜೆಪಿಗರಿಗೆ ಧನ್ಯವಾದ ಹೇಳಬೇಕಿದೆ. ಯಾಕೆಂದ್ರೆ ನಮ್ಮ ನಿಜವಾದ ಬಂಡವಾಳವನ್ನು ಅವರು ತೋರಿಸಿಕೊಟ್ಟಿದ್ದಾರೆ. ನನ್ನನ್ನೇ ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆಸಿದ್ದಾರೆ. ಆದರೆ ಪಾಪ ಐಟಿ ಅಧಿಕಾರಿಗಳಿಗೆ ಏನು ಸಿಗಲಿಲ್ಲ ಎಂದು ಪುಟ್ಟರಾಜು ಗೇಲಿ ಮಾಡಿದರು.