ಕೇರಳ: ಅದಾನಿಗೆ ವಿಮಾನ ನಿಲ್ದಾಣ ಹಸ್ತಾಂತಕ್ಕೆ ಪಿಣರಾಯಿ ವಿಜಯನ್ ವಿರೋಧ

ಕೇರಳ: ಅದಾನಿಗೆ ವಿಮಾನ ನಿಲ್ದಾಣ ಹಸ್ತಾಂತಕ್ಕೆ ಪಿಣರಾಯಿ ವಿಜಯನ್ ವಿರೋಧ

ತಿರುವನಂತಪುರಂ, ಮಾ.1, ನ್ಯೂಸ್‍ ಎಕ್ಸ್‍ ಪ್ರೆಸ್‍: ಅದಾನಿ ಕಂಪನಿಗೆ ತಿರುವನಂತಪುರಂ ವಿಮಾನ ನಿಲ್ದಾಣವನ್ನು ಹಸ್ತಾಂತರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂದು ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರಂ ವಿಮಾನ ನಿಲ್ದಾಣವನ್ನು ಗೌತಮ್‌ ಅದಾನಿ ಒಡೆತನದ ಕಂಪನಿಗೆ ಹಸ್ತಾಂತರಿಸದಂತೆ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಮಹಾನಗರಗಳನ್ನು ಹೊರತಾದ 6 ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಲು ಕೇಂದ್ರ ಸರಕಾರ ಮುಂದಾಗಿತ್ತು. ಈ ಸಂಬಂಧ ನಡೆದ ಬಿಡ್‌ನಲ್ಲಿ ಅದಾನಿ ತಿರುವನಂತಪುರಂ ಸೇರಿದಂತೆ ಬಿಡ್‌ನಲ್ಲಿದ್ದ ಎಲ್ಲಾ 6 ವಿಮಾನ ನಿಲ್ದಾಣಗಳನ್ನು ಹೆಚ್ಚಿನ ಬಿಡ್‌ ಮೊತ್ತ ಸೂಚಿಸಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು.

ಆದರೆ ಈ ಬಿಡ್ ಹಿಂದೆ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಪಿಣರಾಯಿ ವಿಜಯನ್‌ ಅರೋಪಿಸಿದ್ದರು. ಇದೀಗ ಅವರು ಅದಾನಿ ಕಂಪನಿಗೆ ತಿರುವನಂತಪುರಂ ವಿಮಾನ ನಿಲ್ದಾಣವನ್ನು ಹಸ್ತಾಂತರಿಸುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿಯೇ ‘ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಐಡಿಎಸ್ )’ದ ನೇತೃತ್ವದ ವಿಶೇಷ ಕಂಪನಿಯನ್ನು ರಾಜ್ಯ ಸರಕಾರ ಸ್ಥಾಪಿಸಿದೆ. ಇದು ಸರಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ತಿರುವನಂತಪುರಂ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಈ ಕಂಪನಿಗೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಹೊಸ ಕಂಪನಿಗೆ ವಿಮಾನ ನಿಲ್ದಾಣದ ನಿರ್ವಹಣೆಯನ್ನು ನೀಡಿದರೆ ದೇಶ ಮತ್ತು ರಾಜ್ಯ ಎರಡರ ಹಿತಾಸಕ್ತಿಯನ್ನು ಕಾಪಾಡಿದಂತಾಗುತ್ತದೆ ಎಂದು ಹೇಳಿರುವ ಪಿಣರಾಯಿ ವಿಜಯನ್‌, “ವಿಮಾನ ನಿಲ್ದಾಣದ ನಿರ್ವಹಣೆಯ ಕುರಿತ ಯಾವೊಂದು ಅನುಭವವೂ ಇಲ್ಲದ ಒಂದು ಖಾಸಗಿ ಕಂಪನಿ ನಿರ್ವಹಣೆಯ ಗುತ್ತಿಗೆಯನ್ನು ಹೇಗೆ ಪಡೆದುಕೊಂಡಿತು,” ಎಂದು ಪತ್ರದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅವರು, ಕೇರಳದ 2 ವಿಮಾನ ನಿಲ್ದಾಣಗಳ (ಕೊಚ್ಚಿ, ಕಣ್ಣೂರು) ನಿರ್ವಹಣೆಯನ್ನು ಕೇರಳ ಸರಕಾರದಿಂದ ಸ್ಥಾಪನೆಯಾದ ಕಂಪನಿಗಳ ನಡೆಸುತ್ತಿದ್ದು, ಉತ್ತಮ ರೀತಿಯಲ್ಲಿ ಕಾರ್ಯಚರಿಸುತ್ತಿವೆ ಎಂಬುದನ್ನು ಪ್ರಧಾನಿ ಗಮನಕ್ಕೆ ತಂದಿದ್ದಾರೆ.

ಇನ್ನು ವಿಮಾನ ನಿಲ್ದಾಣ ಹಸ್ತಾಂತರಕ್ಕೆ ತಾಂತ್ರಿಕ ಕಾರಣವನ್ನು ಮುಂದಿಟ್ಟಿರುವ ಅವರು, ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಕೇರಳ ಸರಕಾರ 635 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ಕೇಂದ್ರಕ್ಕೆ ಉಚಿತವಾಗಿ ನೀಡಿದೆ. 2005ರಲ್ಲೂ ಪುನಃ 23.57 ಎಕರೆ ಭೂಮಿಯನ್ನು ನೀಡಲಾಗಿದೆ. “ಒಪ್ಪಂದದ ಪ್ರಕಾರ ಭವಿಷ್ಯದಲ್ಲಿ ವಿಮಾನ ನಿಲ್ದಾಣಗಳನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಿದರೆ, ರಾಜ್ಯ ಸರ್ಕಾರದಿಂದ ಉಚಿತವಾಗಿ ಪಡೆದ ಭೂಮಿಯ ಮೌಲ್ಯವನ್ನು ರಾಜ್ಯ ಸರಕಾರದ ಹೆಸರಿನಲ್ಲಿ ಹೂಡಿಕೆಯಾಗಿ ಪರಿವರ್ತಿಸಬೇಕು ಎಂಬ ಷರತ್ತು ಇದೆ” ಎಂಬುದನ್ನು ವಿಜಯನ್ ಪತ್ರದ ಮೂಲಕ ಪ್ರಧಾನಿಗೆ ಮನವರಿಕೆ ಮಾದ್ದಾರೆ.

ಇವೆಲ್ಲದರ ನಡುವೆ ವಿಮಾನ ನಿಲ್ದಾಣ ನಿರ್ವಹಣೆ ಹಸ್ತಾಂತರ ಸಂಬಂಧ ಕೆಎಸ್ಐಡಿಎಸ್ ಈಗಾಗಲೇ ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ ಎಂಬುದನ್ನೂ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆದೇಶ ನೀಡಿರುವ ಕೇರಳ ಹೈಕೋರ್ಟ್‌, ತನ್ನ ಅಂತಿಮ ಆದೇಶದ ನಂತರವೇ ವಿಮಾನ ನಿಲ್ದಾಣವನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂಬುದಾಗಿ ಹೇಳಿದೆ ಎಂಬುದನ್ನೂ ಅವರು ಪತ್ರದಲ್ಲಿ ಪ್ರಧಾನಿಗೆ ತಿಳಿಸಿದ್ದಾರೆ.

ಕಳೆದ ಸೋಮವಾರ ವಿಮಾನ ನಿಲ್ದಾಣಗಳನ್ನು ಖಾಸಗಿ ಕಂಪನಿಗಳಿಗೆ ನೀಡುವ ಬಿಡ್ ನಡೆಸಲಾಗಿತ್ತು. ಪ್ರತೀ ಪ್ರಯಾಣಿಕರ ಹೆಸರಿನಲ್ಲಿ ಎಷ್ಟು ಹಣವನ್ನು ಸರಕಾರಿ ಸ್ವಾಮ್ಯದ ಏರ್ಪೋರ್ಟ್‌ ಮ್ಯಾನೇಜರ್‌ಗಳಿಗೆ ಸಲ್ಲಿಸಬಲ್ಲಿರಿ ಎಂಬುದರ ಆಧಾರದ ಮೇಲೆ ಫೈನಾನ್ಶಿಯಲ್‌ ಬಿಡ್‌ ಕರೆಯಲಾಗಿತ್ತು. ಇದರಲ್ಲಿ ಪ್ರಯಾಣಿಕರೊಬ್ಬರಿಗೆ 135 ರೂ. ನೀಡುವುದಾಗಿ ಕೆಎಸ್‌ಐಡಿಸಿ ಹೇಳಿದರೆ 62 ರೂ. ಸಲ್ಲಿಸಬಹುದು ಎಂದು ಜಿಎಂಆರ್ ಕಂಪನಿ ಬಿಡ್ ಮಾಡಿತ್ತು. ಆದರೆ ಆಕ್ರಮಣಕಾರಿ ಬಿಡ್ ಮಾಡಿದ ಅದಾನಿ ಗ್ರೂಪ್‌ ಆಫ್ ಕಂಪನಿ 168 ರೂ. ಸಲ್ಲಿಸುವ ಪ್ರಸ್ತಾಪ ಮುಂದಿಟ್ಟಿತ್ತು. ಈ ಮೂಲಕ ತಿರುವನಂತಪುರಂ ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆಯನ್ನು ಜೇಬಿಗಿಳಿಸಿಕೊಂಡಿತ್ತು.

ಇದಲ್ಲದೆ ಮಂಗಳೂರು, ಅಹಮದಾಬಾದ್, ಲಕ್ನೋ, ಗುವಾಹಟಿ ಮತ್ತು ಜೈಪುರ ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನೂ ಗೌತಮ್ ಅದಾನಿ ಒಡೆತನ ಕಂಪನಿ ಪಡೆದುಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos