ಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

  • In State
  • August 19, 2020
  • 239 Views
ಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

ತುಮಕೂರು :ಬಿತ್ತನೆಬೀಜ, ಯೂರಿಯಾ ರಸಗೊಬ್ಬರ ಸೇರಿ ವಿವಿಧ ಕೃಷಿ ಪರಿಕರಗಳ ಕೃತಕ ಅಭಾವ ಸೃಷ್ಟಿಸುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಜಾಗೃತರಾಗಿರುವ ಕೃಷಿ ಇಲಾಖೆ ಜಿಲ್ಲೆಯ ವಿವಿಧೆಡೆ ಅನಿರೀಕ್ಷಿತ ದಾಳಿ ನಡೆಸುವ ಮೂಲಕ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾರಂಭಿಸಿದ್ದಾರೆ.
ಜಿಲ್ಲೆಯಲ್ಲಿ ೩೬ ಓಲ್‌ಸೇಲ್ ಅಂಗಡಿಗಳು, ಖಾಸಗಿ ಅಂಗಡಿಗಳು ೩೭೨ ಹಾಗೂ ಸಹಕಾರ ಸಂಘಗಳು ೧೩೯ ಇದ್ದು ಇವುಗಳಲ್ಲಿ ಕೆಲವು ಲೈಸನ್ಸ್ ನವೀಕರಣವಾಗಬೇಕಿದೆ. ಒಟ್ಟು ೫೪೭ ಅಂಗಡಿಗಳನ್ನು ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ, ಉಪನಿರ್ದೇಶಕ ಡಿ.ಉಮೇಶ್ ಹಾಗೂ ಆಯಾ ತಾಲೂಕು ಎಡಿಎಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಜೆಡಿಎ ರಾಜಸುಲೋಚನಾ ನೇತೃತ್ವದ ತಂಡ ಭಾನುವಾರ ತುಮಕೂರಿನ ಮಂಡಿಪೇಟೆ ಸೇರಿ ತಾಲೂಕಿನ ವಿವಿಧ ಭಾಗದಲ್ಲಿ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದೆ, ಉಪನಿರ್ದೇಶಕ ಡಿ.ಉಮೇಶ್ ನೇತೃತ್ವದ ತಂಡ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಮತ್ತಿತರರ ಭಾಗದಲ್ಲಿ ಅಂಗಡಿಗಳ ತಪಾಸಣೆ ನಡೆಸಿದೆ. ಬಹುತೇಕ ಅಂಗಡಿಗಳಲ್ಲಿ ರೈತರು ಗೊಬ್ಬರ ತೆಗೆದುಕೊಂಡು ಹೋಗುವಾಗ ಆಧಾರ್ ಸಂಖ್ಯೆ ತರುವುದಿಲ್ಲ. ಹಾಗಾಗಿ, ನೋಂದಣಿ ಕಷ್ಟವಾಗಿದೆ ಎಂದು ಅಸಹಾಯಕತೆ ವ್ಯಕ್ತ ಪಡಿಸಿದರು. ಕಡ್ಡಾಯವಾಗಿ ರೈತರ ಆಧಾರ್ ಸಂಖ್ಯೆ ನೋಂದಣಿ ಮಾಡಿಕೊಂಡು ಗೊಬ್ಬರ ನೀಡಬೇಕು, ಆಗಿದ್ದರೆ ರೈತರು ಅವರ ಭೂಮಿಗೆ ಎಷ್ಟು ರಸಗೊಬ್ಬರ ಬಳಸುತ್ತಾರೆ ಎಂಬುದು ನಮಗೂ ತಿಳಿಯುತ್ತದೆ ಎಂಬ ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ.
ರೈತರಿಂದ ಬೇಡಿಕೆ ಹೆಚ್ಚಾದ ಸಮಯದಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡಿದರೆ ಸಹಿಸುವುದಿಲ್ಲ, ಅಂಗಡಿಕಾರರು ಸರ್ಕಾರ ನಿಗಧಿ ಮಾಡಿದ ಎಂಆರ್‌ಪಿ ದರದಲ್ಲಿ ಬೀಜ ಹಾಗೂ ಗೊಬ್ಬರ ಮಾರಾಟ ಮಾಡಬೇಕು, ನಕಲಿ ಬೀಜ ಮಾರಾಟ ಕಂಡು ಬಂದಲ್ಲಿ ಲೈಸನ್ಸ್ ರದ್ದು ಪಡಿಸಲಾಗುವುದು ಎಂದು ಎಚ್ಚರಿಸಿದರು. ತಾಲೂಕಿನಲ್ಲಿ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜ ಅಧಿನಿಯಮದಡಿ ಯಾವುದೇ ಕೃಷಿ ಪರಿಕರ ಮಾರಾಟಗಾರರು ಕಾನೂನು ಉಲ್ಲಂಘನೆ ಮಾಡಿದಲ್ಲಿ ರೈತರು ಸಮೀಪದ ಕೃಷಿ ಅಧಿಕಾರಿ ಅಥವಾ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಿ ದೂರು ನೀಡಬಹುದು, ಪ್ರಸ್ತುತ ಜಿಲ್ಲೆಯಲ್ಲಿ ೩೧೦೦ಟನ್ ಯೂರಿಯಾ ದಾಸ್ತಾನಿದೆ ಎಂದು ರಾಜಸುಲೋಚನಾ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos