ಬೆಂಗಳೂರು,ಡಿ.19 : ನಗರದ ಬಾಗಲಗುಂಟೆ ವೃತ್ತದ ಬಳಿ ಬಿಎಂಟಿಸಿ ಮಹಿಳಾ ನಿರ್ವಾಹಕಿ ಮೇಲೆ ಆಸಿಡ್ ದಾಳಿ ಎರಚಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಬಾಗಲಗುಂಟೆ ವೃತ್ತದ ಬಳಿ ಬಿಎಂಟಿಸಿ ಮಹಿಳಾ ನಿರ್ವಾಹಕಿ ಮೇಲೆ ಸ್ಕೂಟರ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳಾ ನಿರ್ವಾಹಕಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಇಂದಿರಾ ಬಾಯಿ ಬಿಎಂಟಿಸಿ ನಿರ್ವಾಹಕಿ (35). ಹಾವನೂರು ಬಡಾವಣೆ ನಿವಾಸಿ ಇಂದಿರಾ ಬಾಯಿ ಪೀಣ್ಯಾದ 9ನೇ ಡಿಪೋದ ಬಿಎಂಟಿಸಿ ಬಸ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಬೆಳಗ್ಗೆ 5.45ರಲ್ಲಿ ಮನೆಯಿಂದ ಡಿಪೋಗೆ ನಡೆದು ಹೋಗುತ್ತಿದ್ದರು.
ಸ್ವಲ್ಪ ದೂರ ಹೋಗುತ್ತಿದ್ದಂತೆ ಸ್ಕೂಟರ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇಂದಿರಾ ಅವರ ಬಲಭಾಗಕ್ಕೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಪರಿಣಾಮ ಮುಖ, ಕೈ ಸೇರಿದಂತೆ ಇನ್ನಿತರ ಭಾಗಗಳಿಗೆ ಗಂಭೀರ ಗಾಯವಾಗಿದ್ದು, ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.