ಮಣಿಪಾಲ, ಅ. 30 : “ಕ್ಯಾರ್’ ಚಂಡಮಾರುತದ ಪ್ರಭಾವ ಮರೆಯಾಗಿ ಕರಾವಳಿಗರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಂತೆಯೇ ಕೊಮೊರಿನ್ ಮತ್ತು ಹಿಂದೂ ಮಹಾಸಾಗರದ ಆಸುಪಾಸಿನ ಭಾಗದಲ್ಲಿ ರೂಪುಗೊಂಡಿರುವ ನಿಮ್ನ ಒತ್ತಡ ಮತ್ತೆ ಮಳೆಯನ್ನು ತರುವುದೇ ಎಂಬ ಕಳವಳಕ್ಕೆ ಕಾರಣವಾಗಿದೆ.
ಈ ನಿಮ್ನ ಒತ್ತಡವು ಅ. 30 ಮತ್ತು 31ರ ಹೊತ್ತಿಗೆ ಲಕ್ಷದ್ವೀಪ – ಮಾಲ್ಡೀವ್ಸ್ ಸಮೀಪದಲ್ಲಿ ವಾಯುಭಾರ ಕುಸಿತವಾಗಿ ಪರಿವರ್ತನೆ ಹೊಂದುವ ಸಾಧ್ಯತೆ ಇದ್ದು, ಕ್ಯಾರ್ ಸಂಚರಿಸುವ ದಾರಿಯಲ್ಲಿ ಸಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಈ ವಾಯುಭಾರ ಕುಸಿತದ ಪ್ರಭಾವದಿಂದ ತಮಿಳುನಾಡು, ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕದಲ್ಲಿ ಅ. 31ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.