ಬೆಂಗಳೂರು, ಮಾ.27, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಿರುವ ಕುರಿತಂತೆ ಬಿಜೆಪಿಯೊಳಗೆ ಅಸಮಾಧಾನ ಮುಂದುವರಿದಿದ್ದು, ತೇಜಸ್ವಿಗೆ ಟಿಕೆಟ್ ನೀಡಿದ್ದು ಹೇಗೆ ಎನ್ನುವುದು ತಿಳಿಯುವವರೆಗೆ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ಶಾಸಕ ವಿ. ಸೋಮಣ್ಣ ಹೇಳಿದ್ದಾರೆ.
ಅನಂತ್ ಕುಮಾರ್ ರ ಪತ್ನಿ ತೇಜಸ್ವಿನಿಯವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಬೆಳವಣಿಗೆ ದುರದೃಷ್ಟಕರ. ತೇಜಸ್ವಿನಿಯವರಿಗೆ ಟಿಕೆಟ್ ಕೈತಪ್ಪಿದ್ದು ಹೇಗೆ ಎನ್ನುವ ಬಗ್ಗೆ ವಿವರಿಸಿದ ನಂತರವಷ್ಟೇ ತೇಜಸ್ವಿ ಪರ ಪ್ರಚಾರ ಮಾಡುತ್ತೇನೆ ಎಂದವರು ಹೇಳಿದರು.
ಈ ಬೆಳವಣಿಗೆಯಲ್ಲಿ ಬಸವನಗುಡಿ ಶಾಸಕ ಎಲ್.ಎ. ರವಿಯವರ ಕೈವಾಡವಿದೆ ಎಂದು ಆರೋಪಿಸಿದ ಅವರು, ಅವರ ಒಪ್ಪ ಸಂಬಂಧಿ ಕಾರ್ಪೊರೇಟರ್ ಆಗಿದ್ದು, ಇದೀಗ ಅವರ ಸಂಬಂಧಿಗೆ ಟಿಕೆಟ್ ಸಿಕ್ಕಿದೆ. ಇದು ಯಾಕೆ ನಡೆಯಿತು ಎನ್ನುವ ಬಗ್ಗೆ ನಮಗೆ ಸ್ಪಷ್ಟತೆ ಬೇಕಾಗಿದೆ ಎಂದವರು ಹೇಳಿದರು.