ಬೆಂಗಳೂರು, ಮಾ, 23, ನ್ಯೂಸ್ ಎಕ್ಸ್ ಪ್ರೆಸ್: . ಕರ್ನಾಟಕ ಸರ್ಕಾರದ ಮಾಜಿ ಮುಖ್ಯಕಾರ್ಯದರ್ಶಿಯಾದ ಕೆ. ರತ್ನಪ್ರಭಾ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸ್ಪರ್ಧಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಆದರೆ, ರತ್ನಪ್ರಭಾ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರು. ಅವರ ನೆಚ್ಚಿನ ಅಧಿಕಾರಿ ಎಂದೇ ಗುರುತಿಸಿಕೊಂಡವರು. ಸಿದ್ದರಾಮಯ್ಯ ಸರ್ಕಾರದಲ್ಲಿ ಮುಖ್ಯಕಾರ್ಯದರ್ಶಿಯಾಗಿ ನೇಮಕವಾಗಲು ಖರ್ಗೆ ಅವರೂ ಕಾರಣ ಎನ್ನಲಾಗಿದೆ. ಪರಿಸ್ಥಿತಿ ಹೀಗಿರುವಾಗ ಖರ್ಗೆ ವಿರುದ್ಧವೇ ರತ್ನಪ್ರಭಾ ಅವರು ಸ್ಪರ್ಧೆ ಮಾಡಲಿದ್ದಾರಾ ಎಂಬ ಅನುಮಾನವೂ ಇದೆ. ರತ್ನಪ್ರಭಾ ಅವರು ಈ ಬಗ್ಗೆ ನಾನು ಈಗಲೇ ಏನನ್ನು ಹೇಳಲಾಗುವುದಿಲ್ಲ. ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದೆ. ಮುಂದೆ ಏನು ಎಂಬುದನ್ನು ನೋಡಬೇಕು ಎಂದು ಪ್ರತಿಕ್ರಿಯಿಸಿದರುಈಗಾಗಲೇ ಬಿಜೆಪಿಯಿಂದ ಈ ಕ್ಷೇತ್ರಕ್ಕೆ ಉಮೇಶ್ ಜಾಧವ್ ಹೆಸರನ್ನು ಘೋಷಿಸಲಾಗಿದೆ. ಆದರೆ, ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಇನ್ನು ಅಂಗೀಕರಿಸಿಲ್ಲ. ಮತ್ತು ಇವರ ಮೇಲೆ ಪಕ್ಷಾಂತರ ಕಾಯ್ದೆಯಡಿ ಪ್ರಕರಣವನ್ನು ಕಾಂಗ್ರೆಸ್ ದಾಖಲಿಸಲಿದೆ. ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾ. 26 ಕೊನೆಯ ದಿನ. ಒಂದು ವೇಳೆ ವಿಚಾರಣೆ ಮುಂದೂಡಿದರೂ ನಾಮಪತ್ರ ಸಲ್ಲಿಕೆಗೆ ತಾಂತ್ರಿಕ ಸಮಸ್ಯೆ ಎದುರಾಗಲಿದೆ. ಹೀಗಾಗಿ ಸ್ಪೀಕರ್ ನಡೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.