ಕೋಲಾರ; ಎಸ್ಎಫ್ ಐ ನಿಂದ ಭಗತ್ ಸಿಂಗ್ ಹುತಾತ್ಮ ದಿನಾಚರಣೆ
———————————————————————————————————-
ಕೋಲಾರ, ಮಾ.23, ನ್ಯೂಸ್ ಎಕ್ಸ್ ಪ್ರೆಸ್: ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಹೋರಾಡಲಿಲ್ಲ. ಭಾರತದಲ್ಲಿ ಅಮೂಲಾಗ್ರ ಬದಲಾವಣೆ ತರಲು ಅಸಮಾನತೆಯ ಬುನಾದಿ ಮೇಲೆ ನಿರ್ಮಾಣವಾಗಿರುವ ಶ್ರೇಣೀಕೃತ, ಊಳಿಗಮಾನ್ಯ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿದ್ದ ಶೋಷಣೆ ಮತ್ತು ಅಸಮಾನತೆಯ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಿ ನಮ ಸಮ ಸಮಾಜದ ಕನಸುಗಳನ್ನು ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳು ಒಂದು ವೇಳೆ ಸ್ವಾತಂತ್ರ್ಯದ ಕನಸು ಸಾಕಾರಗೊಳ್ಳುವ ಮುನ್ನವೇ ಅಮರರಾದರು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಕೆ.ವಾಸುದೇವ್ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಮುಳಬಾಗಿಲು ನಗರದ ಎಸ್ ಡಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 88ನೇ ವರ್ಷದ ಭಗತ್ ಸಿಂಗ್ ಹುತಾತ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ಹುತಾತ್ಮ ಎನ್ನುವ ಗೌರವ ಪಡೆಯುವ ಹಕ್ಕು ಕೇವಲ ಪ್ರಾಮಾಣಿಕ ದಿಟ್ಟ ಕ್ರಾಂತಿಕಾರಿಗಳಿಗೆ ಮಾತ್ರವೇ ಇರುತ್ತದೆ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವಿರಾರು ಜನ ತಮ್ಮ ಜೀವವನ್ನೇ ಪಣವಿಟ್ಟು ಬ್ರಿಟೀಷರ ವಿರುದ್ಧ ಹೋರಾಡಿ ಮೃತರಾದರೂ ಹುತಾತ್ಮ ಎಂಬ ಪಟ್ಟಕ್ಕೆ ಅರ್ಹನಾದ ವ್ಯಕ್ತಿ ಸಂಗಾತಿ ಭಗತ್ಸಿಂಗ್, ರಾಜಗುರು ಸುಖದೇವ್ ಮತ್ತು ಆತನ ಸಂಗಾತಿಗಳು ಮಾತ್ರ ಎಂದರು.
ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಮಾತನಾಡಿ, ಇಂದು ಹುತಾತ್ಮ ಭಗತ್ ಸಿಂಗ್ ನ ರಾಜಕೀಯ, ಆರ್ಥಿಕ, ಸೈದ್ಧಾಂತಿಕ, ವಿಚಾರಗಳು ಆದರ್ಶ ಪ್ರೇರೇಪಣೆಯಾಗಿವೆ. ಕೇಸರಿ ಪಡೆಗಳಿಗೆ ಭಗತ್ ಸಿಂಗ್ ನಾಸ್ತಿಕವಾದ, ಜ್ಯಾತ್ಯಾತೀತ,ಸಮಾಜವಾದಿ ವಿಚಾರಗಳು ಬಲಪಂಥೀಯ ರಾಜಕಾರಣಕ್ಕೆ ವಿರುದ್ಧವಾಗಿರುವುದರಿಂದ ಭಗತ್ ಸಿಂಗ್ ನನ್ನು ಕೇಸರಿಪಡೆಗಳು ಹೈಜಾಕ್ ಮಾಡಲು ಸಾಧ್ಯವಾಗಿಲ್ಲವೆಂದರು.
ಪೋಲಿಸ್ ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬ್ರಿಟೀಷ್ ಆಡಳಿತ ವ್ಯವಸ್ಥೆ ಭಗತ್ ಸಿಂಗ್ ಎಂಬ ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಿತ್ತು. ವ್ಯಕ್ತಿಗಳನ್ನು ಕೊಂದು ಹಾಕಬಹುದು ಆದರೆ ಅವರ ವಿಚಾರಗಳು ಅಲ್ಲ.. ಭಗತ್ ಸಿಂಗ್ ಹುತಾತ್ಮನಾದ ನಂತರವೂ ಆತನ ವಿಚಾರ, ತತ್ವ ಸಿದ್ಧಾಂತಗಳು ಜೀವಂತವಾಗಿವೆ. ಇನ್ನೂ ಶತಮಾನಗಳ ಕಾಲ ಜೀವಂತವಾಗಿರುತ್ತವೆ. ಇಂದು ನಾವು ಈ ಯುವ ಕ್ರಾಂತಿಕಾರಿಯನ್ನು ನೆನೆಯುವುದೇ ಆದರೆ ಬೇರೊಂದು ನೆಲೆಗಟ್ಟಿನಲ್ಲೇ ಸ್ಮರಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್ ಡಿಸಿ ಕಾಲೇಜಿನ ಪ್ರಾಂಶುಪಾಲ ಮುರಳಿ ಕೃಷ್ಣ ಮಾತನಾಡಿ, ಭಗತ್ ಸಿಂಗ್ ಇಂದಿಗೂ ಭಾರತದ ಭವಿಷ್ಯ ಕಟ್ಟಲು ಚಿಂತಿಸುವವರೆಲ್ಲರೊಳಗೆ ಅದಮ್ಯ ಚೇತನವಾಗಿದ್ದಾನೆ. ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ಬಿದ್ದ ಮರಗಳು ಅಲ್ಲ ಬಿತ್ತಿದ ಬೀಜಗಳು. ನಮ್ಮೆಲ್ಲರಲ್ಲೂ ಭಗತ್ ಸಿಂಗ್ ವಿಚಾರಗಳನ್ನು ವಿಚಾರಧಾರೆ ಕ್ರಾಂತಿಯನ್ನುಂಟು ಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷೆ ಗಾಯತ್ರಿ, ತಾಲ್ಲೂಕು ಕಾರ್ಯದರ್ಶಿ ಆನಂದ್, ಶಂಕರ್, ಯಶ್ವಂತ್, ವೇಗಶ್ರೀ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.