ನ್ಯೂಸ್ ಎಕ್ಸ್ ಪ್ರೆಸ್, ಮಾ.22: ವೈದ್ಯಕೀಯ ಶಾಸ್ತ್ರದಲ್ಲಿ ಬೆಳ್ಳುಳ್ಳಿಗೆ ಪ್ರಮುಖವಾದ ಸ್ಥಾನವಿದೆ. ಇದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ. ಬೆಳ್ಳುಳ್ಳಿಯ ಸಣ್ಣ ಸಣ್ಣ ಎಸಳುಗಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಹಲವಾರು ವರ್ಷಗಳಿಂದ ಅನೇಕ ಚಿಕಿತ್ಸೆಗಳಲ್ಲಿಯೂ ಬಳಸಲಾಗುತ್ತಿದೆ. ಅಧಿಕ ರಕ್ತದೊತ್ತಡ, ಹೃದ್ರೋಗ, ಕ್ಷಯ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗಾಗಿ ತಯಾರಿಸುವ ಔಷಧಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು. ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರವನ್ನ ವಹಿಸುತ್ತದೆ.
ಬೆಳ್ಳುಳ್ಳಿ ತನ್ನದೇ ಆದ ವಿಶೇಷ ಗುಣವನ್ನ ಹೊಂದಿದೆ. 100 ಬೆಳ್ಳುಳ್ಳಿಯಲ್ಲಿ 100 ಗ್ರಾಮ್ ಕ್ಯಾಲೊರಿ ಇರುತ್ತೆ. ಅಲ್ಲದೇ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್, ವಿಟಮಿನ್ B, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತ ಹಲವಾರು ಲಾಭದಾಯಕ ಅಂಶಗಳಿವೆ.
ಇನ್ನು ಅಲೆಸಿನ್ ಹಾಗೂ ಸಲ್ಫರ್ ಅಂಶದಿಂದ ಬೆಳ್ಳುಳ್ಳಿ ಹೆಚ್ಚು ಕಡು ವಾಸನೆಯಿಂದ ಕೂಡಿದೆ. ಇದು ಸೋಂಕಿನ ವಿರುದ್ಧ ಹೋರಾಡುತ್ತದೆ. ಅಷ್ಟೇ ಅಲ್ಲ ಬೆಳ್ಳುಳ್ಳಿ ಆ್ಯಂಟಿ ಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದು ರೋಗಗಳನ್ನ ಹರಡುವ ವೈರಸ್ಗಳನ್ನ ನಾಶಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಇನ್ಫ್ಲಾಮೇಟರಿ ಅಂಶವಿದ್ದು, ದೇಹದ ಎಲ್ಲಾ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.
ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸುವುದರಿಂದ ರಕ್ತ ಸಂಚಾರ ಸುಗಮವಾಗುವುದರ ಜೊತೆಗೆ ಹೃದಯರಕ್ತನಾಳದ ಆರೋಗ್ಯವೂ ವೃದ್ಧಿಸುತ್ತದೆ. ಅಲ್ಲದೇ ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ. ಉಸಿರಾಟದ ತೊಂದರೆಗಳಿಗೆ ಬೆಳ್ಳುಳ್ಳಿ ರಾಮಬಾಣವಾಗಿ ಕೆಲಸ ಮಾಡುತ್ತದೆ. ಆ್ಯಂಟಿ ಏಜಿಂಗ್ ಆಗಿ ಕೂಡಾ ಬೆಳ್ಳುಳ್ಳಿ ಕೆಲಸ ಮಾಡುತ್ತದೆ.