ನ್ಯೂಸ್ ಎಕ್ಸ್ ಪ್ರೆಸ್, ಮಾ.22: ಪೋಷಕಾಂಶಭರಿತ ಗಡ್ಡೆರೂಪದ ತರಕಾರಿಗಳಲ್ಲಿ ಮೂಲಂಗಿ ಕೂಡಾ ಒಂದು. ಸಲಾಡ್ನಲ್ಲಿ, ಸಾಂಬಾರ್, ಪಲ್ಯದ ರೂಪದಲ್ಲಿ ಮೂಲಂಗಿಯನ್ನ ಸೇವಿಸಲಾಗುತ್ತದೆ. ಸಸ್ಯಹಾರಿಗಳ ಬಹು ಬಳಕೆಯ ತರಕಾರಿಯಾಗಿರುವ ಮೂಲಂಗಿಯಲ್ಲಿ ಕೇವಲ ರುಚಿಯಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯೂ ಇದೆ. ವಿಟಮಿನ್ ಸಿ, ಎ, ಬಿ ಅಂಶ ಇದರಲ್ಲಿ ಹೆಚ್ಚಾಗಿದೆ. ಇದನ್ನು ಹಸಿಯಾಗಿ ತಿನ್ನುವುದರಿಂದ ಉಪಯೋಗಗಳು ಹೆಚ್ಚು. ಮೂಲಂಗಿಯ ಪ್ರಯೋಜನಗಳು ಇಲ್ಲಿವೆ.
ಕೆಂಪು ರಕ್ತ ಕಣ: ಮೂಲಂಗಿ ಸೇವನೆಯಿಂದ ದೇಹದ ರಕ್ತ ಕಣಗಳಿಗೆ ಹಾನಿಯಾಗುವುದನ್ನು ತಡೆಗಟ್ಟುತ್ತದೆ. ಇದು ರಕ್ತಕ್ಕೆ ಬೇಕಾಗಿರುವ ಆಕ್ಸಿಜನ್ ಲೆವಲ್ ಹೆಚ್ಚಿಸುತ್ತದೆ.
ಫೈಬರ್: ಮೂಲಂಗಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಪಿತ್ತರಸ ಉತ್ಪಾದನೆಯನ್ನು ನಿಯಂತ್ರಿಸುವುದಲ್ಲೇ, ಮೂತ್ರಕೋಶ ಸಂಬಂಧಿತ ಕಾಯಿಲೆಗಳನ್ನು ಮೂಲಂಗಿ ನಿವಾರಿಸುತ್ತದೆ. ಹಾಗೇ ದೇಹದ ನೀರಿನಂಶವನ್ನು ಕಾಪಾಡುವಲ್ಲಿ ಮೂಲಂಗಿ ಸಹಕಾರಿಯಾಗಿದೆ.
ಹೃದಯಕ್ಕೆ ಸಹಕಾರಿ: ಹೃದಯ ಸರಿಯಾಗಿ ಕಾರ್ಯನಿರ್ವಹಿಸಲು ಮೂಲಂಗಿ ಸಹಾಯಕಾರಿಯಾಗಿದೆ. ಮೂಲಂಗಿಯಲ್ಲಿ ವಿಟಮಿನ್ ಸಿ ಹೆಚ್ಚಿರುವುದರಿಂದ ಕಾರ್ಡಿಯೋವ್ಯಾಸ್ಕುಲರ್ ರಿಸ್ಕ್ ಕಡಿಮೆ ಮಾಡುವಲ್ಲಿ ಇದು ಸಹಕಾರಿ.
ರಕ್ತದೋತ್ತಡ ನಿಯಂತ್ರಿಸುತ್ತದೆ: ರಕ್ತದೋತ್ತಡವನ್ನು ನಿಯಂತ್ರಿಸುವಲ್ಲಿ ಮೂಲಂಗಿ ಬಹು ಉಪಯೋಗಕಾರಿ. ನಿಮ್ಮ ರಕ್ತದ ಹರಿವನ್ನು ನಿಯಂತ್ರಣದಲ್ಲಿಡುತ್ತದೆ. ಅದರಲ್ಲೂ ನೀವು ಹೈಪರ್ಟೆನ್ಶನ್ನಿಂದ ಬಳಲುತ್ತಿದ್ದರೆ ಮೂಲಂಗಿ ಸೇವಿಸುವುದು ಉತ್ತಮ.
ರೋಗನಿರೋಧಕ ಶಕ್ತಿ: ಮೂಲಂಗಿಯಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ರೋಗನಿರೋಧಕ ಶಕ್ತಿಗೆ ಸಹಾಯಕಾರಿ. ಸಾಮಾನ್ಯವಾಗಿ ಇದು ದೇಹವನ್ನು ಕೆಮ್ಮು ಹಾಗೂ ಶೀತದಿಂದ ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಮೂಲಂಗಿ ಹೆಚ್ಚಿಸುತ್ತದೆ. ನಿಯಮಿತವಾಗಿ ಮೂಲಂಗಿ ಸೇವಿಸುತ್ತಿದ್ದರೆ ಉರಿಯೂತ, ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.
ರಕ್ತ ನಾಳಗಳನ್ನು ಬಲಪಡಿಸುತ್ತದೆ: ಮೂಳೆ ಹಾಗೂ ರಕ್ತ ನಾಳಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಪೋಟ್ಯಾಶಿಯಂ ಅಧಿಕವಾಗಿರುವುದರಿಂದ ರಕ್ತನಾಳಗಳನ್ನ ಸಡಿಲಗೊಳಿಸಿ, ರಕ್ತ ಸುಗುಮವಾಗಿ ಹರಿಯಲು ನೆರವಾಗುತ್ತದೆ.
ಜೀರ್ಣಕ್ರಿಯೆ: ಮೂಲಂಗಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಸ್ಥೂಲಕಾಯತೆ, ಗ್ಯಾಸ್ಚ್ರಿಕ್ ಸಮಸ್ಯೆ ಹಾಗೂ ವಾಕರಿಕೆ ಸಮಸ್ಯೆಗಳನ್ನು ನಿವಾರಿಸುತ್ತದೆ.
ಪೋಷಕಾಂಶ ಅಧಿಕ: ಕೆಂಪು ಮೂಲಂಗಿಯಲ್ಲಿ ವಿಟಮಿನ್ ಇ, ಎ, ಸಿ, ಬಿ6 ಅಂಶವಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅತ್ಯಧಿಕ ಫೈಬರ್, ಪೊಟ್ಯಾಶಿಯಂ. ಫಾಸ್ಫರಸ್, ಮೆಗ್ನೇಶಿಯಂ ಹಾಗೂ ಕ್ಯಾಲ್ಸಿಯಂ ಮೂಲಂಗಿಯಲ್ಲಿ ಹೆಚ್ಚಾಗಿದ್ದು, ದೇಹ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.
ಚರ್ಮ: ನೀವು ಪ್ರತಿದಿನ ಮೂಲಂಗಿ ರಸವನ್ನು ಕುಡಿಯುತ್ತಿದ್ದರೆ, ಇದು ನಿಮ್ಮ ಚರ್ಮದ ಆರೋಗ್ಯವನ್ನು ಬೂಸ್ಟ್ ಮಾಡುತ್ತದೆ. ಹಾಗೂ ಚರ್ಮದ ಡ್ರೈನೆಸ್ ಕಡಿಮೆ ಮಾಡುತ್ತದೆ. ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮೂಲಗಿ ಪೇಸ್ಟ್ ಉಪಯೋಗಿಸಬಹುದು. ಅಲ್ಲದೇ ಕೂದಲ ಆರೈಕೆಗೂ ಮೂಲಂಗಿ ಬಳಕೆ ಮಾಡಬಹುದು. ಮೂಲಂಗಿ ಪೇಸ್ಟ್ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ತಲೆ ಕೂದಲು ಉದರುವುದನ್ನು ತಡೆಗಟ್ಟುತ್ತದೆ.