ಮಂಡ್ಯ, ಮಾ.22, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಅಂಬರೀಶ್ ಹಾಗೂ ಸಚಿವ ಎಂ.ಬಿ.ಪಾಟೀಲ್ ಅವರುಗಳ ಆಪ್ತ ಎಂದೇ ಗುರುತಿಸಿಕೊಂಡಿರುವ ಸಚ್ಚಿದಾನಂದರನ್ನು ಕೆಪಿಸಿಸಿ ಸದಸ್ಯ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ.
ಮೈತ್ರಿ ಹಿನ್ನೆಲೆ ಕಾಂಗ್ರೆಸ್, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಅಲ್ಲದೇ, ದೋಸ್ತಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ನಿಖಿಲ್ ಕುಮಾರಸ್ವಾಮಿಗೆ ಬೆಂಬಲಿಸುವಂತೆ ಹೇಳಿತ್ತು. ಆದ್ರೆ ಕಾಂಗ್ರೆಸ್ ಕಾರ್ಯಕರ್ತ ಸಚ್ಚಿದಾನಂದ ಬಹಿರಂಗವಾಗಿಯೇ ಸುಮಲತಾ ಅಂಬರೀಶ್ಗೆ ಬೆಂಬಲ ನೀಡುತ್ತಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿ ಕಚೇರಿಯಿಂದ ನೊಟೀಸ್ ನೀಡಲಾಗಿತ್ತು. ಆದ್ರೂ ಕೂಡಾ ಸಚ್ಚಿದಾನಂದ ತಮ್ಮ ನಿರ್ಧಾರ ಬದಲಿಸದೇ ಸುಮಲತಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ಸಚ್ಚಿದಾನಂದರನ್ನು ಉಚ್ಚಾಟನೆ ಮಾಡಿ ಆದೇಶಿಸಿದ್ದಾರೆ.