ಬೆಂಗಳೂರು, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಎಸ್ಎಲ್ಸಿ ಪರೀಕ್ಷೆ ನಾಳೆಯಿಂದ ಪ್ರಾರಂಭವಾಗಲಿದ್ದು, ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸನ್ನದ್ಧರಾಗಿದ್ದಾರೆ. ಮಾ.21 ರಿಂದ ಏ.4 ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಈ ಬಾರಿ 8ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸುಗಮವಾಗಿ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗಳನ್ನು ನಮೂದಿಸಲಾಗುತ್ತಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್, ಸ್ಮಾರ್ಟ್ಪೋನ್, ಸ್ಮಾರ್ಟ್ ವಾಚ್ಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮುನ್ನ 15 ನಿಮಿಷಗಳ ಕಾಲ ಪ್ರಶ್ನೆಪತ್ರಿಕೆ ಓದಲು ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೊಳಗಾಗದೆ ನಿರ್ಭೀತರಾಗಿ ಪರೀಕ್ಷೆಯನ್ನು ಬರೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
ತುಮಕೂರಲ್ಲಿ 36,196 ಪರೀಕ್ಷಾರ್ಥಿಗಳು: ತುಮಕೂರು, ಮಾ.20-ಜಿಲ್ಲೆಯ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ 36196 ವಿದ್ಯಾರ್ಥಿಗಳು ನಾಳೆ (ಮಾ.21) ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಡಿಡಿಪಿಐ ಎಂ.ಆರ್.ಕಾಮಾಕ್ಷಿ ತಿಳಿಸಿದ್ದಾರೆ.
ಜಿಲ್ಲೆಯ 141(ತುಮಕೂರು-83, ಮಧುಗಿರಿ-58)ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತುಮಕೂರಿನ 23751(ಬಾಲಕರು-13156, ಬಾಲಕಿಯರು-10595) ಹಾಗೂ ಮಧುಗಿರಿಯ 12445(ಬಾಲಕರು-6572, ಬಾಲಕಿಯರು-5873) ಸೇರಿ ಒಟ್ಟು 36,196 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಜಿಲ್ಲೆಯಲ್ಲಿ 141 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 62 ಕ್ಲಸ್ಟರ್ ಸಹಿತ, 76 ಕ್ಲಸ್ಟರ್ ರಹಿತ ಹಾಗೂ 3 ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ತುಮಕೂರು ನಗರದ ವಿದ್ಯಾನಿಕೇತನ ಶಾಲೆ, ಎಸ್.ಐ.ಟಿ.ಯ ವಾಸವಿ ಪ್ರೌಢಶಾಲೆ ಹಾಗೂ ಮಧುಗಿರಿಯ ಜ್ಯೂಪಿಟರ್ ಪಬ್ಲಿಕ್ ಶಾಲೆ ಸೇರಿ 3 ಖಾಸಗಿ ಕೇಂದ್ರಗಳಲ್ಲಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಅಕ್ರಮಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಎಲ್ಲಾ 141 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿಯನ್ನು ಅಳವಡಿಸಲಾಗಿದೆ. ಅಲ್ಲದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುವಾಗುವಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ ಪರೀಕ್ಷಾ ಕೇಂದ್ರಗಳಿಗೂ ತಲಾ ಒಬ್ಬ ಆರೋಗ್ಯ ಸಹಾಯಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಾಗದಂತೆ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಹಾಗೂ ನಿರಂತರ ವಿದ್ಯುತ್ ಕಲ್ಪಿಸಲು ಬೆಸ್ಕಾಂ ಸಂಸ್ಥೆಗೆ ಮನವಿ ಮಾಡಲಾಗಿದೆ. ವಿಕಲಚೇತನ ಮಕ್ಕಳಿಗೆ ನೆಲಹಂತದಲ್ಲಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಅವಧಿಯಲ್ಲದೆ ಪ್ರಶ್ನೆ ಪತ್ರಿಕೆಯನ್ನು ಓದಲು 15 ನಿಮಿಷ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ. ಪ್ರಶ್ನೆ ಪತ್ರಿಕೆಯನ್ನು ಓದಿ ಅಂಕಗಳನ್ನು ಆಧರಿಸಿ ಉತ್ತರವನ್ನು ಬರೆಯಬೇಕು. ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಯಾರೊಬ್ಬರಿಗೂ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಸ್ಮಾರ್ಟ್ ವಾಚ್/ ಎಲೆಕ್ಟ್ರಾನಿಕ್ ವಾಚ್ಗಳನ್ನು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತರುವಂತಿಲ್ಲ.
ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮುಗಿದ ನಂತರ ನಗರದ 6 ಕೇಂದ್ರಗಳಲ್ಲಿ ಏಪ್ರಿಲ್ 10 ರಿಂದ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕು. ಸುಮಾರು 2500 ಶಿಕ್ಷಕರನ್ನು ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮೌಲ್ಯ ಮಾಪನ ಕೇಂದ್ರದಲ್ಲಿ ಈ ಬಾರಿ ಆನ್ಲೈನ್ ಪೋರ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ 15 ಲ್ಯಾಪ್ಟಾಪ್ಗಳನ್ನು ಅಳವಡಿಸಲಾಗುವುದು. ಮೌಲ್ಯ ಮಾಪನದ ಪ್ರತಿ ದಿನದ ಮಾಹಿತಿಯನ್ನು ಆನ್ಲೈನ್ ಪೋರ್ಟಿಂಗ್ ಮೂಲಕ ಮಂಡಳಿಗೆ ನೀಡಲಾಗುವುದು.