ಬೆಂಗಳೂರು, ಮಾ.18, ನ್ಯೂಸ್ ಎಕ್ಸ್ ಪ್ರೆಸ್ : ಬೆಂಗಳೂರು ಮಹಾನಗರ ಹಲವು ಮಾಫಿಯಾಗಳಲ್ಲಿ ಮುಳುಗಿ ಹೋಗಿದೆ. ಅದರಲ್ಲಿ ಪಾರ್ಕಿಂಗ್ ಮಾಫಿಯಾವೂ ಒಂದು. ಇದಕ್ಕೆ ಕಡಿವಾಣ ಹಾಕುವ ನೆಪದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ನೀರಿನ ದರ, ವಿದ್ಯುತ್ ದರ ಏರಿಕೆ ಬರೆಯ ನಡುವೆ ಸ್ಮಾರ್ಟ್ ಪಾರ್ಕಿಂಗ್ ನೆಪದಲ್ಲಿ ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಅದೂ ಘಂಟೆಗಳ ಲೆಕ್ಕದಲ್ಲಿ! ನೀರು, ಸೂರು, ರಸ್ತೆ, ಚರಂಡಿ, ವಾಹನಗಳಿಗೆ ರಕ್ಷಣೆ ಸೇರಿದಂತೆ ಕನಿಷ್ಠ ವ್ಯವಸ್ಥೆಗಳನ್ನು ಪಾಲಿಕೆ ಮಾಡಬೇಕು. ಈಗ ಸ್ಮಾಟ್ ವ್ಯವಸ್ಥೆಯಡಿಯಲ್ಲಿ ವಸೂಲಿಗೆ ಯೋಜನೆಯನ್ನು ರೂಪಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುವುದರಲ್ಲಿ ಅನುಮಾನವಿಲ್ಲ!!
ವಾಹನ ದಟ್ಟಣೆ ಮತ್ತು ರಸ್ತೆ ಗುಣಮಟ್ಟ ಆಧರಿಸಿ ವಾಹನ ನಿಲುಗಡೆ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ), ಸಿ (ಸಾಮಾನ್ಯ) ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅದರಂತೆ ಎ ವರ್ಗದಲ್ಲಿ 14, ಬಿ ವರ್ಗದಲ್ಲಿ 46, ಸಿ ವರ್ಗದಲ್ಲಿ 25 ರಸ್ತೆಗಳು ಬರಲಿವೆ. ಪ್ರೀಮಿಯಂ (ಎ ರಸ್ತೆಗಳು)-ದ್ವಿಚಕ್ರ 15 ರೂ., ನಾಲ್ಕು ಚಕ್ರ 30 ರೂ., ವಾಣಿಜ್ಯ (ಬಿ ರಸ್ತೆಗಳು)-ದ್ವಿಚಕ್ರ 10ರೂ, ನಾಲ್ಕು ಚಕ್ರ 20 ರೂ., ಸಾಮಾನ್ಯ (ಸಿ ರಸ್ತೆಗಳು)-ದ್ವಿಚಕ್ರ 5 ರೂ., ನಾಲ್ಕು ಚಕ್ರ 15 ರೂ.ಗಳು. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಯಿಂದ ಬಿಬಿಎಂಪಿಗೆ 10 ವರ್ಷ ಅವಧಿಯಲ್ಲಿ 397 ಕೋಟಿ ರೂ. ಆದಾಯ ಬರಲಿದೆ. ವಾಹನ ನಿಲುಗಡೆ ಸಮಸ್ಯೆ ಪರಿಹಾರ ದೊರಕಲಿದೆ. ಅಲ್ಲದೆ, ನಗರದ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಆದರೆ ಬೈಕ್, ಕಾರು ಹೊಂದಿರುವವರು ಇನ್ನು ಮುಂದೆ ಪ್ರತಿದಿನ ಗಂಟೆ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ಕಟ್ಟಬೇಕಾಗಿದೆ.
10 ವರ್ಷಕ್ಕೆ 397 ಕೋಟಿ ಆದಾಯವನ್ನು ಗುರಿಯಾಗಿರಿಸಿಕೊಂಡು ಸ್ಮಾರ್ಟ್ ಪಾರ್ಕಿಂಗ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವ ಬಿಬಿಎಂಪಿ ನಗರದ ವಾಹನ ಮಾಲೀಕರನ್ನು ಸುಲಿಗೆ ಮಾಡಲು ಯೋಜಿಸಿದೆ. ಹೀಗಾಗಿ ಟೆಂಡರ್‍ನಲ್ಲಿ ಆಯ್ಕೆಯಾಗಿರುವ ನಿತ್ಯ ನಾಯರ್ ಎಂಬ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ಕಾಮಗಾರಿ ನಡೆಸಲು ಸೂಚಿಸಲಾಗಿದೆಯಂತೆ.