ನವದೆಹಲಿ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಆಪ್ತರ ವಲಯದಲ್ಲಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ, ಏಕಾಏಕಿ ಪಕ್ಷ ತೊರೆದು ಬಹುಜನ ಸಮಾಜಪಕ್ಷ ಸೇರ್ಪಡೆಯಾಗಿದ್ದಾರೆ. ಶುಕ್ರವಾರದವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದೊಂದಿಗೆ ಇದ್ದ ಅವರು ಹಠಾತ್ತಾಗಿ ಶನಿವಾರ ಬಿಎಸ್‌ಪಿ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಆಘಾತ ಉಂಟುಮಾಡಿದೆ. ಇದರಿಂದ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್‌ಗೆ ಹಿನ್ನಡೆಯುಂಟಾಗಿದೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್‌ಪಿ ನಡುವೆ ಮೈತ್ರಿ ಒಪ್ಪಂದ ಮಾಡಿಕೊಳ್ಳುವುದರಲ್ಲಿ ಡ್ಯಾನಿಶ್ ಅಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ನಿಂದ 10 ಸೀಟು ಗಿಟ್ಟಿಸಿಕೊಂಡಿದ್ದೇವೆ ಎಂದ ದೇವೇಗೌಡ ಎರಡು ದಿನಗಳ ಹಿಂದಷ್ಟೇ ಅವರು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಲೋಕಸಭೆ ಚುನಾವಣೆಗೆ ಸೀಟುಗಳ ಹಂಚಿಕೆ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದರು. ಅವರು ಪಕ್ಷ ತೊರೆಯುವ ಯಾವ ಸೂಚನೆಯನ್ನೂ ನೀಡಿರಲಿಲ್ಲ. ಈ ಅನಿರೀಕ್ಷಿತ ಬೆಳವಣಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದರಲ್ಲಿ ಡ್ಯಾನಿಶ್ ಅಲಿ ಪ್ರಮುಖ ಪಾತ್ರವಹಿಸಿದ್ದರು. ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿ ಸಂಪುಟ ರಚನೆ ಕಸರತ್ತಿನಲ್ಲಿ ಸಾಕಷ್ಟು ಶ್ರಮವಹಿಸಿದ್ದರು. ಪಕ್ಷದಲ್ಲಿ ಅಸಮಾಧಾನ ಉಂಟಾದಾಗ ಅದನ್ನು ಸರಿಪಡಿಸುವುದರಲ್ಲಿಯೂ ಕೆಲಸ ಮಾಡಿದ್ದರು. ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ಉಂಟಾದ ಗೊಂದಲವನ್ನು ಬಗೆಹರಿಸುವುದರಲ್ಲಿ ಶುಕ್ರವಾರದವರೆಗೂ ಅವರು ತೊಡಗಿಸಿಕೊಂಡಿದ್ದರು. ಈಗ ಅವರು ಹಠಾತ್ತಾಗಿ ಪಕ್ಷ ತೊರೆದಿರುವುದು ಸಮ್ಮಿಶ್ರ ಸರ್ಕಾರಕ್ಕೆ ತುಸು ಹಿನ್ನಡೆ ಉಂಟುಮಾಡಲಿದೆ ಎನ್ನಲಾಗಿದೆ. ಅವರ ಗೈರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಸಮನ್ವಯ ಕಾಯ್ದುಕೊಳ್ಳುವ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಮತ್ತೊಬ್ಬ ನಾಯಕನ ಅಗತ್ಯ ಜೆಡಿಎಸ್‌ಗೆ ಎದುರಾಗಿದೆ.