ಚಿಕ್ಕಬಳ್ಳಾಪುರ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಕೆಎಸ್ಆರ್ಟಿಸಿ ಬಸ್ನಲ್ಲಿ ಪಕ್ಕದಲ್ಲಿ ಕೂತಿದ್ದ ಯುವತಿಯ ಜೊತೆ ಕುಡಿದ ಅಮಲಿನಲ್ಲಿ ಅಸಭ್ಯ ವರ್ತನೆ ಮಾಡಿದ ವ್ಯಕ್ತಿಯೊಬ್ಬ ಸಖತ್ ಗೂಸಾ ತಿಂದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರದ ಯುವತಿ ಬೆಂಗಳೂರಿನಿಂದ ಕೆಎಸ್ಆರ್ಟಿಸಿ ಬಸ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ವೇಳೆ ಆಕೆಯ ಪಕ್ಕದಲ್ಲಿ ಕೂತಿದ್ದ ಚಿತ್ತೂರು ಮೂಲದ ನಾರಾಯಣರಾಜು ಎಂಬಾತ ವಿನಾಕಾರಣ ಮೈ-ಕೈ ಮುಟ್ಟಿ ಮಾತಾಡಿಸಲು ಮುಂದಾಗಿದ್ದಾನೆ.
ಕುಡಿದ ಅಮಲಿನಲ್ಲಿದ್ದ ನಾರಾಯಣರಾಜು ಯುವತಿ ಮೈಮೇಲೆ ಬಿದ್ದಿದ್ದಾನೆ. ಇದರಿಂದ ಇರುಸು ಮುರುಸುಗೊಂಡ ಯುವತಿ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಈ ವೇಳೆ ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜು ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆಯೇ ಅಲ್ಲಿಗೆ ದೌಡಾಯಿಸಿದ ಯುವತಿ ಸಹೋದರ, ವ್ಯಕ್ತಿಯನ್ನು ಬಸ್ ನಿಂದ ಕೆಳಗಿಳಿಸಿ ಥಳಿಸಿದ್ದಾನೆ.
ಈ ವೇಳೆ ವಿಷಯ ತಿಳಿದು ಸಾರ್ವಜನಿಕರೆಲ್ಲರೂ ಸಖತ್ ಗೂಸಾ ಕೊಟ್ಟಿದ್ದಾರೆ. ವಿಷಯ ತಿಳಿದ ಚಿಕ್ಕಬಳ್ಳಾಪುರ ನಗರ ಪೊಲೀಸರು ಕಿಡಿಗೇಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ನಾರಾಯಣರಾಜು ತಾನು ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಆಗಿದ್ದು, ಕುಡಿದ ಅಮಲಿನಲ್ಲಿ ಕೈ ಕಾಲು ಟಚ್ ಆಗಿದೆ ಅಷ್ಟೇ ಉದ್ದೇಶಪೂರ್ವಕವಾಗಿ ನಾನೂ ಏನೂ ಮಾಡಿಲ್ಲ ಎಂದು ಹೇಳಿದ್ದಾನೆ.
ಈ ಬಗ್ಗೆ ದೂರು ನೀಡೋಕೆ ಯುವತಿ ಹಾಗೂ ಯುವತಿ ಸಹೋದರ ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಪೊಲೀಸರು ಕಿಡಿಗೇಡಿ ಬಳಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.