ಬೆಂಗಳೂರು, ಮಾ.15, ನ್ಯೂಸ್ ಎಕ್ಸ್ ಪ್ರೆಸ್ : ತನ್ನ ಸಾಧನೆಗಳನ್ನು ಬಣ್ಣಿಸಿರುವ ಪುಸ್ತಿಕೆಯ 50,000 ಪ್ರತಿಗಳನ್ನು ಹಂಚಲು ಅಂಚೆ ಇಲಾಖೆಯನ್ನು ಮೈಸೂರು – ಮಡಿಕೇರಿ ಸಂಸದ ಪ್ರತಾಪ ಸಿಂಹ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಪ್ರತಾಪ ಸಿಂಹ ಹಾಗೂ ಅಂಚೆ ಇಲಾಖೆಯ ಹಿರಿಯ ಸೂಪರಿಂಡೆಂಟ್ ಮೇಲೆ ದೂರು ಸಲ್ಲಿಸುವ ಮೂಲಕ ಹೊಸ ವಿವಾದವೊಂದು ಶುರುವಾಗಿದೆ.
ಕಾಂಗ್ರೆಸ್ ಮುಖಂಡ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾಗಿರುವ ಕೆ.ಎಸ್.ಶಿವರಾಂ ಅವರು ಮೈಸೂರು ಡೆಪ್ಯುಟಿ ಕಮಿಷನರ್ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಅಭಿರಾಮ್ ಜಿ. ಶಂಕರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸುಪರ್ದಿಗೆ ಒಳಪಡುವ ಅಂಚೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರತಾಪ್ ಸಿಂಹ ಮತ್ತು ಅಂಚೆ ಇಲಾಖೆಯ ಹಿರಿಯ ಸೂಪರಿಂಟೆಂಡೆಂಟ್ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಈ ದೂರನ್ನು ನೀಡಲಾಗಿದೆ. ಈ ದೂರಿನ ಅನ್ವಯ ಚುನಾವಣಾ ಅಧಿಕಾರಿಗಳು ಅಂಚೆ ಇಲಾಖೆಯ ಸೂಪರಿಂಟೆಂಡೆಂಟ್ ಅವರಿಗೆ ನೋಟೀಸ್ ಕಳಿಸಿದ್ದು ಉತ್ತರಕ್ಕಾಗಿ ನಿರೀಕ್ಷಿಸುತ್ತಿದ್ದಾರೆ.
ಮೈಸೂರಿನ 22 ಅಂಚೆ ಕಚೇರಿಗಳ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆಗೂ ಸಂಸದ ಪ್ರತಾಪ್ ಸಿಂಹ ಅವರ ‘ಸಾಧನೆ’ ಕುರಿತ ಪುಸ್ತಿಕೆಯನ್ನು ತಲುಪಿಸಲು ಅಂಚೆ ಅಧಿಕಾರಿ ಆದೇಶ ನೀಡಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಂಸದರಾಗಿರುವ ಪ್ರತಾಪ್ ಸಿಂಹ್ ಅವರು ಅಂಚೆ ಕಚೇರಿ ದುರ್ಬಳಕೆ ಮಾಡಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ, ಅಲ್ಲದೇ ಅಂಚೆ ಇಲಾಖೆಯ ಜಿಲ್ಲಾ ಹಿರಿಯ ಸೂಪರಿಂಟೆಂಡೆಂಟ್ ಅವರು ಪ್ರತಾಪ ಸಿಂಹ ಅವರ ಈ ಪುಸ್ತಕಗಳನ್ನು ಕಾಲಮಿತಿಯಲ್ಲಿ ತಪ್ಪದೇ ಮನೆಮನೆಗೆ ವಿತರಿಸಬೇಕು ಎಂದು ಕಟ್ಟಪ್ಪಣೆ ಹೊರಡಿಸುವ ಮೂಲಕ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿ ಅವರ ಮೇಲೂ ದೂರು ಸಲ್ಲಿಸಲಾಗಿದೆ.
ಈ ದೂರಿನ ಕುರಿತು ಮೈಸೂರು ಚುನಾವಣಾಧಿಕಾರಿಗಳನ್ನು ಸಂಪರ್ಕಿಸಲಾಗಿ,
“ಈ ಸಂಬಂಧ ದೂರನ್ನು ಸ್ವೀಕರಿಸಲಾಗಿದೆ. ಮುಂದಿನ ಕ್ರಮವಾಗಿ ಅಂಚೆ ಇಲಾಖೆಯ ಸೂಪರಿಂಟೆಂಡೆಂಟ್ ಅವರಿಗೆ ನೋಟೀಸ್ ಕಳಿಸಲಾಗಿದೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಡೆಪ್ಯುಟಿ ಕಮಿಶನರ್ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.