ಬೆಂಗಳೂರು, ಮಾ.12, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆ ದಿನಾಂಕ ಮಾ.10ರಂದಷ್ಟೇ ಘೋಷಣೆಯಾಗಿದೆ. ಈ ಬೆನ್ನಲ್ಲೇ ಬೆಂಗಳೂರು ಬಿಜೆಪಿ ನಾಯಕರಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮತ್ತೆ ವೈಯಕ್ತಿಕ ರಾಜಕಾರಣದ ಗಲಾಟೆ ಶುರು ಮಾಡಿಕೊಂಡಿದ್ದಾರೆ. ಈ ಮೂಲಕ ಪಕ್ಷದ ರಾಜ್ಯ ನಾಯಕರಿಗೆ ಹೊಸ ಸಂಕಷ್ಟವೊಂದನ್ನು ಸೃಷ್ಟಿಸಿದ್ದಾರೆ.
ನಿನ್ನೆ ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಶಿವಾಜಿನಗರ ವಿಧಾನಸಭೆ ಕ್ಷೇತ್ರದ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಲೋಕಸಭೆ ಚುನಾವಣೆ ಉಸ್ತುವಾರಿ ಮುರಳೀಧರ್ ರಾವ್ ಮುಂದೆಯೇ ಮಾಜಿ ಡಿಸಿಎಂ ಆರ್.ಅಶೋಕ್ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪರಸ್ಪರ ಏರುಧ್ವನಿಯಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಮಾಜಿ ಬಿಜೆಪಿ ನಾಯಕರನ್ನು ಆರ್.ಅಶೋಕ್ ಪುನಃ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಅಮಿತ್ ಶಾ ಅವರಿಗೆ ಸಂಪಂಗಿ ರಾಮನಗರದ ಗೋಪಿ ಚಪ್ಪಲಿ ತೋರಿಸಿದ್ದರು. ಶರವಣ್ ಸೇರಿದಂತೆ ಇಬ್ಬರೂ ಕೂಡ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಅಲ್ಲದೇ, ಗೋಪಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಗೋಪಿ ಮತ್ತು ಶರವಣ್ ಆರ್.ಅಶೋಕ್ ಮೂಲಕ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಮುರಳೀಧರ್ ರಾವ್ ಮುಂದೆ ದೂರು ನೀಡಿದ್ದಾರೆ.
ಆರ್.ಅಶೋಕ್ ಅವರ ನಡೆಗೆ ಕಟ್ಟಾ ಗರಂ ಆಗಿದ್ದಾರೆ. ಬಳಿಕ ಈ ವಿಚಾರವಾಗಿ ಕಟ್ಟಾ ಹಾಗೂ ಅಶೋಕ್ ನಡುವೆ ವಾಗ್ದಾಳಿ ನಡೆಯಿತು. ಮಾತುಕತೆಯ ಅರ್ಧದಲ್ಲೇ ನಾಯ್ಡು ಹೊರ ನಡೆದಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಒತ್ತಾಯದ ಮೇರೆಗೆ ಇಬ್ಬರು ಪಕ್ಷ ವಿರೋಧಿ ನಾಯಕರನ್ನ ಪುನಃ ಪಕ್ಷಕ್ಕೆ ಸೇರ್ಪಡಿಸಿಕೊಳ್ಳಲು ಅಶೋಕ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.