ನ್ಯೂಸ್ ಎಕ್ಸ್ ಪ್ರೆಸ್, ಮಾ.9: ನೆತ್ತಿ ಸುಡುವ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವುದೆಂದರೆ ನಿಜಕ್ಕೂ ಅದು ಸವಾಲೇ ಸರಿ. ಬಿಸಿಲಿನಿಂದ ಬಳಲಿ ಬೆಂಡಾದವರು ದಾಹ ಇಂಗಿಸಿಕೊಳ್ಳಲು ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ಅಥವಾ ಎಳನೀರಿನ ಮೊರೆ ಹೋಗುತ್ತಾರೆ. ಅದು ಬಿಟ್ಟರೆ ಮತ್ತೆ ಹೆಚ್ಚಿನವರು ಇಷ್ಟಪಡುವುದು ಕಬ್ಬಿನಹಾಲು.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಾದ ಗಮನ ಕೊಡುವ ಕಾರಣ ರಾಸಾಯನಿಕ ಮಿಶ್ರಿತ ಜ್ಯೂಸ್ ಗಳ ಬದಲು ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕರಿಸುವ ಕಬ್ಬಿನ ಹಾಲನ್ನೇ ಇಷ್ಟಪಡುತ್ತಾರೆ. ಬೇರೆ ಪಾನೀಯಗಳಿಗೆ ಹೋಲಿಸಿದರೆ ಕಬ್ಬಿನಹಾಲು ದುಬಾರಿಯೇನಲ್ಲ. ಬದಲಿಗೆ ಕೈಗೆಟುಕುವ ದರದಲ್ಲಿ ಸಿಗುವ ಕಾರಣ ಎಲ್ಲರೂ ಅದನ್ನೇ ಕುಡಿಯಬಯಸುತ್ತಾರೆ.
ಕಬ್ಬಿನಹಾಲು ಕೇವಲ ಸಕ್ಕರೆ ಮತ್ತು ಬೆಲ್ಲಕ್ಕೆ ಮಾತ್ರ ಸೀಮಿತವಲ್ಲ. ಇದರಲ್ಲಿರುವ ಅಂಶಗಳ ಬಗ್ಗೆ ಜನರಿಗೆ ತಿಳಿದಿಲ್ಲ ಅಷ್ಟೇ. ಹಲವಾರು ವಿಟಮಿನ್ ಗಳಿಂದ ಕೂಡಿದ ಕಬ್ಬಿನಹಾಲು ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಯಾಕೆಂದರೆ ಇದರಲ್ಲಿ ಕಬ್ಬಿಣದ ಅಂಶ, ಗ್ಲುಕೋಸ್ ಹೇರಳವಾಗಿದೆ. ಅಷ್ಟೇ ಅಲ್ಲದೇ ನಮ್ಮ ದೇಹಕ್ಕೆ ಅವಶ್ಯಕವಾದ ಪ್ರೋಟೀನ್, ವಿಟಮಿನ್ ಎಲ್ಲವನ್ನೂ ಇದು ನೀಡುತ್ತದೆ. ಮುಖ್ಯವಾಗಿ ಜಾಂಡೀಸ್ ಇರುವವರಿಗೆ ಕಬ್ಬಿನಹಾಲು ಹೇಳಿ ಮಾಡಿಸಿದ ಮದ್ದು. ಪ್ರತಿದಿನ ಕಬ್ಬಿನಹಾಲು ಸೇವಿಸುವುದರಿಂದ ಜಾಂಡೀಸ್ ಕಡಿಮೆಯಾಗುತ್ತದೆ. ತಂಪಾದ ಕಬ್ಬಿನಹಾಲಿನ ಸೇವನೆ ದಣಿದ ದೇಹದ ಆಯಾಸ ಕಡಿಮೆ ಮಾಡುವುದಲ್ಲದೇ ಕಿಡ್ನಿ, ಹೃದಯ, ಮೆದುಳು, ಕಣ್ಣಿನ ಕಾರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿ. ಜೊತೆಗೆ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನೂ ಸರಿ ಮಾಡುತ್ತದೆ.
ಕಬ್ಬಿನಹಾಲು ಉತ್ತಮವೆಂದೂ ಸಿಕ್ಕಲೆಲ್ಲಾ ಕುಡಿಯಬೇಡಿ. ಆದಷ್ಟು ತಾಜಾ ಕಬ್ಬಿನಹಾಲಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ.