ಕ್ರಿಕೆಟರ್ ರವೀಂದ್ರ ಜಡೇಜ ಪತ್ನಿ ಬಿಜೆಪಿಗೆ ಸೇರ್ಪಡೆ

ಕ್ರಿಕೆಟರ್ ರವೀಂದ್ರ ಜಡೇಜ ಪತ್ನಿ ಬಿಜೆಪಿಗೆ ಸೇರ್ಪಡೆ

ಮಾ.4, ನ್ಯೂಸ್ ಎಕ್ಸ್ ಪ್ರೆಸ್, ಜಾಮ್ ನಗರ (ಗುಜರಾತ್): ಟೀಮ್ ಇಂಡಿಯಾದ  ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಮಾ.3 ರಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಗುಜರಾತಿನ ಕೃಷಿ ಸಚಿವ ಆರ್ ಸಿ ಫಾಲ್ದು ಹಾಗೂ ಸಂಸದರಾದ ಪೂನಮ್ ಮದಂ ಅವರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಾಮ್ ನಗರದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕೂ ಮುನ್ನ ರಿವಾಬಾ ಅವರ ಕೈಗೆ ಕೇಸರಿ ಬಾವುಟ ಸಿಕ್ಕಿದೆ. ರಿವಾಬಾ ಅವರು ಕರ್ಣಿ ಸೇನಾದ ಮಹಿಳಾ ಘಟಕದ ಮುಖ್ಯಸ್ಥೆಯಾಗಿ, ಸಾಕಷ್ಟು ಹೆಸರು ಗಳಿಸಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ಸೆಲೆಬ್ರಿಟಿಗಳಿಗೆ ಗಾಳ ಹಾಕುತ್ತಿರುವ ಬಿಜೆಪಿ ಈಗಾಗಲೇ ಅನೇಕ ಚಿತ್ರರಂಗ ತಾರೆಯರು, ಕ್ರಿಕೆಟರ್, ಮಾಜಿ ಕ್ರಿಕೆಟರ್ ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಕೆಲವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಲು ಯೋಜನೆ ಹಾಕಿಕೊಂಡಿದೆ.

ರಿವಾಬಾ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದೇ ಬಿಂಬಿಸಲಾಗುತ್ತಿದೆ. ಪದ್ಮಾವತ್ ಚಿತ್ರ ಬಿಡುಗಡೆಗೆ ವಿರೋಧಿಸಿದ್ದ ಕಾರ್ಣಿ ಸೇನೆ ಸಾಕಷ್ಟು ಸದ್ದು ಮಾಡಿದ್ದು ಸುಳ್ಳಲ್ಲ.

ರವೀಂದ್ರ ಜಡೇಜಾ ಹಾಗೂ ರಿವಾಬಾ ಅವರ ಮದುವೆಗೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲಾಗಿತ್ತು. ನಂತರ ಮೋದಿ ನಿವಾಸಕ್ಕೆ ಭೇಟಿ ನೀಡಿದ ದಂಪತಿಗಳು ಮಾತುಕತೆ ನಡೆಸಿದ್ದರು. ಬಿಜೆಪಿ ಸರ್ಕಾರದ ಯೋಜನೆಗಳ ಪ್ರಚಾರವನ್ನು ದಂಪತಿಗಳು ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಫ್ರೆಶ್ ನ್ಯೂಸ್

Latest Posts

Featured Videos