“ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ನಿರ್ಧಾರ”

“ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ನಿರ್ಧಾರ”

ಬೆಂಗಳೂರು, ಮಾ.2, ನ್ಯೂಸ್‍ ಎಕ್ಸ್‍ ಪ್ರೆಸ್‍: ಖಾಸಗಿ ಇಂಜಿನಿಯರಿಂಗ ಕಾಲೇಜುಗಳ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಇಂದು ನಗರದಲ್ಲಿ ಕಾಮೆಡ್-ಕೆ ಸೇರಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ವಿಷಯ ತಿಳಿಸಿದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಳ ಮಾಡುವ ಪ್ರಸ್ತಾಪವಾಗಿತ್ತು. ಆದರೆ ನ್ಯಾ.ಶೈಲೇಂದ್ರಕುಮಾರ್ ನೇತೃತ್ವದ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ನಿಗದಿ ಸಮಿತಿ ಶೇ.8ರಷ್ಟು ಹೆಚ್ಚಳಕ್ಕೆ ಸೀಮಿತಗೊಳಿಸಿತ್ತು.

ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಶೇ.10ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಆದರೆ ಸರ್ಕಾರಿ ಕಾಲೇಜುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶುಲ್ಕ ಹೆಚ್ಚಳ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿ ಇಲಾಖೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ಧರಿಸಲಾಗಿದೆ ಎಂದರು.

ಮೊದಲನೇ ಸ್ಲ್ಯಾಬ್‍ನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸರ್ಕಾರಿ ಸೀಟುಗಳಿಗೆ 2018-19ನೇ ಸಾಲಿನಲ್ಲಿ 53,460 ರೂ. ನಿಗದಿಯಾಗಿತ್ತು. ಅದನ್ನು 2019-20ನೇ ಸಾಲಿಗೆ 58,800 ರೂ.ಗೆ ಪರಿಷ್ಕರಿಸಲಾಗಿದೆ.

2ನೇ ಸ್ಲ್ಯಾಬ್ 2018-19ನೇ ಸಾಲಿನಲ್ಲಿ 59,400 ರೂ. ಇದ್ದ ಶುಲ್ಕವನ್ನು 65,340 ರೂ.ಗೆ ಪರಿಷ್ಕರಿಸಲಾಗಿದೆ. ಹಾಗೆಯೇ ಕಾಮೆಡ್-ಕೆ ಸೀಟುಗಳನ್ನು ಮೊದಲ ಸ್ಲ್ಯಾಬ್‍ನಲ್ಲಿ 2018-19ರಲ್ಲಿ 1,30,680 ರೂ. ಶುಲ್ಕವನ್ನು 1,43,748 ರೂ.ಗೆ ಹೆಚ್ಚಿಸಲಾಗಿದೆ.

2ನೇ ಸ್ಲ್ಯಾಬ್‍ನಲ್ಲಿ 1,83,600 ರೂ. ಇದ್ದ ಶುಲ್ಕವನ್ನು 2,01,960 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡವಿಲ್ಲ. ಆದರೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಇಂಜಿನಿಯರಿಂಗ್ ಕೋರ್ಸ್‍ಗಳ ಪ್ರವೇಶಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶುಲ್ಕ ನಿಗದಿ ಪಡಿಸಲಾಗಿದೆ. ಸದ್ಯಕ್ಕೆ ಯವುದೇ ಶುಲ್ಕ ನಿಗದಿ ಸಮಿತಿಗಳನ್ನು ರಚಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos