ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ: ಡಿಕೆಶಿ

ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ: ಡಿಕೆಶಿ

ಬೆಂಗಳೂರು: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ತುಮಕೂರಿನ ಸುಂಕಾಪುರ ಬಳಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಪರಿವೀಕ್ಷಣೆ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಯಾವುದೇ ರೈತರು ಗಾಬರಿಯಾಗುವುದು ಬೇಡ. ನಾನು ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ತುಮಕೂರು ಜಿಲ್ಲೆಯ ರೈತರ ರಕ್ಷಣೆ ಬಗ್ಗೆ ತೀರ್ಮಾನ ಮಾಡುತ್ತೇನೆ. ಕೇವಲ ಕುಣಿಗಲ್ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳ ಹಿತ ನಮಗೆ ಮುಖ್ಯ. ನಾವೆಲ್ಲರೂ ಸೇರಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡೋಣ. ನಿಮ್ಮ ಸಮಸ್ಯೆ ಏನೇ ಇದ್ದರೂ ನಾನು ಅದನ್ನು ಬಗೆಹರಿಸುತ್ತೇನೆ ಎಂದು ಧೈರ್ಯ ತುಂಬಿದರು.

ಕೇಂದ್ರ ಸಚಿವರಾದ ಸೋಮಣ್ಣ ಹಾಗೂ ಶಾಸಕರ ಸಲಹೆ ಮೇರೆಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಳ ಪರಿಶೀಲನೆ ಮಾಡಲು ಬಂದಿದ್ದೇನೆ. ನಾನು ಒಂದು ಕ್ಷೇತ್ರಕ್ಕೆ ಸೀಮಿತವಾದವನಲ್ಲ. ಕರ್ನಾಟಕ ರಾಜ್ಯದ ನೀರಾವರಿ ಮಂತ್ರಿಯಾಗಿದ್ದೇನೆ. ತುಮಕೂರಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ನಮ್ಮ ಜವಾಬ್ದಾರಿ. ತುಮಕೂರಿನ ಜನರು ಪ್ರತಿ ಸಂದರ್ಭದಲ್ಲಿಯೂ ನಮಗೆ ಸಂಯಮದಿಂದ ಸಹಕಾರ ನೀಡಿದ್ದಾರೆ ಎಂದರು. ಇದನ್ನೂ ಓದಿ: ಭದ್ರಾ ನದಿಗೆ ಬಾಗಿನ

ಈ ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ನಾನು ನೀರಾವರಿ ಸಚಿವನಾಗಿದ್ದ ವೇಳೆ ಈ ಯೋಜನೆ ಪ್ರಾರಂಭಿಸಲಾಯಿತು. ನಂತರ ಬಿಜೆಪಿ ಸರ್ಕಾರ ಈ ಯೋಜನೆ ನಿಲ್ಲಿಸಿತ್ತು. ಪರಿಣಾಮ 600 ಕೋಟಿಯಿದ್ದ ಯೋಜನಾ ವೆಚ್ಚ ಇಂದು ಒಂದು ಸಾವಿರ ಕೋಟಿಗೆ ಏರಿಕೆಯಾಗಿದೆ. ವೈ.ಕೆ ರಾಮಯ್ಯ ಅವರ ಕಾಲದಿಂದ ಈ ಹೋರಾಟ ನಡೆದಿದ್ದು, ಇದಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಕೆಲಸ ಆರಂಭವಾಗಿದ್ದು, ಪೈಪ್ ಗಳ ಖರೀದಿ ಹಾಗೂ ಕೆಲಸ ಆರಂಭಿಸಿ 400 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಇದು ನಾಲ್ಕೈದು ತಿಂಗಳಲ್ಲಿ ಮುಗಿಯುವ ಕೆಲಸ ಎಂದು ಹೇಳಿದರು.

ಕಾವೇರಿಯಿಂದ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು. ಈ ಹೇಮಾವತಿ, ಹಾರಂಗಿ, ಕಬಿನಿ, ಕೆಆರ್ ಎಸ್ ಜಲಾಶಯದಿಂದ ಈ ವರ್ಷ ಈಗಾಗಲೇ 220 ಟಿಎಂಸಿ ನೀರು ಹೋಗಿದೆ. ಇನ್ನು ನಾಲ್ಕೈದು ತಿಂಗಳು ಮಳೆ ಬರುವ ಸಾಧ್ಯತೆ ಇದೆ. ಸುಮಾರು 200 ಟಿಎಂಸಿ ನೀರು ಸಮುದ್ರ ಸೇರುವ ನಿರೀಕ್ಷೆ ಇದೆ. ಇದನ್ನು ತಡೆದು ನಮ್ಮ ರೈತರಿಗೆ ಸಹಾಯ ಮಾಡಬೇಕು. ಇದಕ್ಕಾಗಿ ಕಾಲುವೆಗಳಲ್ಲಿ ನೀರು ಹರಿಸಬೇಕು. ನೀರು ಹೆಚ್ಚಾಗಿದ್ದಾಗ ಮಾತ್ರ ಬಳಸಲು ಈ ಯೋಜನೆ ತಂದಿದ್ದೇವೆ, ನಮಗೆ ಎಲ್ಲಾ ತಾಲೂಕುಗಳು ಒಂದೇ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos