ಮಂಡ್ಯ: ಮದ್ದೂರು ಪಟ್ಟಣದ ರಾಮ್ ರಹೀಂ ನಗರಕ್ಕೆ ಹೊಂದಿಕೊಂಡಿರುವ ಚನ್ನೇಗೌಡ ಬಡಾವಣೆಯ ನಿವಾಸಿಗಳು ನಿನ್ನೆ (ಭಾನುವಾರ ಸೆ.7) ರಾತ್ರಿ ಗಣಪತಿ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಮಸೀದಿ ಬಳಿಗೆ ಮೆರವಣಿಗೆ ಬಂದಿದ್ದು, ಯಾವುದೇ ಘೋಷಣೆ ಕೂಗಬಾರದು, ಮೈಕ್ ಹಾಕಬಾರದು ಎಂದು ಎಚ್ಚರಿಕೆ ನೀಡಿದ್ದರು. ಅದರಂತೆ ಮೈಕ್ ಆಫ್ ಮಾಡಿ ಮೆರವಣಿಗೆ ಮಾಡಲಾಗಿತ್ತು. ಇದಾದ ಬಳಿಕ ಲೈಟ್ ಆಫ್ ಮಾಡಿ ಏಕಾಏಕಿ ಗಣಪತಿ ಮೆರವಣಿಗೆಗೆ ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲುತೂರಾಟದ ಬೆನ್ನಲ್ಲೇ ಪ್ರತಿಭಟನೆ ಜೋರಾಗಿ ನಡೆದಿದ್ದು ನಾಳೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.
ಇನ್ನು ಕಲ್ಲು ಎಸೆದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳದೆ ಹೋದರೆ ನಾನೇ ಮದ್ದೂರಿಗೆ ಬರಬೇಕಾಗುತ್ತದೆ ಎಂದು ಮಂಡ್ಯ ಎಸ್ಪಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಈ ಕುರಿತು ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಒತ್ತಡಕ್ಕೆ ಮಣಿದರೆ ಖುದ್ದಾಗಿ ನಾನೇ ಮದ್ದೂರಿಗೆ ಬರಬೇಕಾಗುತ್ತದೆ ಎಂದು ಮಂಡ್ಯ ಎಸ್ಪಿಗೆ ಕರೆ ಮಾಡಿ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: ಮದ್ದೂರು ಗಲಾಟೆ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಹೇಳಿದ್ದೇನು?
ಅಲ್ಲದೆ ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಮಂಡ್ಯ ಎಸ್ಪಿ ಹಾಗೂ ಡಿಸಿಗೆ ಕರೆ ಮಾಡಿ ಮಾತನಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಒತ್ತಡಕ್ಕೆ ಮಣಿದರೆ ಖುದ್ದಾಗಿ ನಾನೇ ಮದ್ದೂರಿಗೆ ಬರಬೇಕಾಗುತ್ತದೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.