ಕಾಂಗ್ರೆಸ್ ಪಕ್ಷದ ಹೋರಾಟ ಮುಂದೂಡಿಕೆ

ಕಾಂಗ್ರೆಸ್ ಪಕ್ಷದ ಹೋರಾಟ ಮುಂದೂಡಿಕೆ

ಬೆಂಗಳೂರು: ಶಿಬು ಸೊರೇನ್ ಬುಡಕಟ್ಟು ಸಮುದಾಯದ ಹಿರಿಯ ನಾಯಕರು. ಕಾಂಗ್ರೆಸ್ ಪಕ್ಷದ ಬಹುಕಾಲದ ಮೈತ್ರಿ ನಾಯಕರು. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಶಿಬು ಸೊರೇನ್ ಅವರ ನಿಧನಕ್ಕೆ 3 ದಿನಗಳ ಶೋಕಾಚರಣೆ ಹಿನ್ನೆಲೆಯಲ್ಲಿ ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಪ್ರತಿಭಟನಾ ಸಭೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಫ್ರೀಡಂ ಪಾರ್ಕ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಶಿಬು ಸೊರೇನ್ ಅವರಿಗೆ ಗೌರವ ಸಲ್ಲಿಸಬೇಕು. ಅವರ ಅಂತ್ಯಕ್ರಿಯೆ ಮಂಗಳವಾರ (ನಾಳೆ) ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆತುರದಲ್ಲಿ ಮಾಡುವುದು ಬೇಡ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ. ಶೋಕಾಚರಣೆ ಆಚರಿಸುವ ದಿನ ದೇಶಕ್ಕೆ ಒಂದು ಸಂದೇಶ ನೀಡುವ ಕಾರ್ಯಕ್ರಮ ಬೇಡ ಎಂದು ನಿರ್ಧರಿಸಿದ್ದೇವೆ. ಈ ವಿಚಾರವಾಗಿ ನಮ್ಮ ನಾಯಕರ ಜೊತೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ದೇಶದಲ್ಲಿ ಗೊಂದಲ ಸೃಷ್ಟಿಸಲು ಹೊರಟ ಕಾಂಗ್ರೆಸ್: ಬಿ.ವೈ. ವಿ

ಮಂಗಳವಾರದ ಕಾರ್ಯಕ್ರಮಕ್ಕೆ ಮಾಡಿಕೊಂಡಿರುವ ಸಿದ್ಧತೆ ಹಾಗೇ ಮುಂದುವರಿಸಿಕೊಂಡು ಹೋಗಬೇಕು ಎಂದು ಪಕ್ಷದ ನಾಯಕರು, ಶಾಸಕರು, ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. 8ರಂದು ಅದೇ ಸ್ಥಳದಲ್ಲಿ, ಅದೇ ಸಮಯಕ್ಕೆ ನಡೆಯಲಿದೆ. ನಮ್ಮ ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರು ಈ ಹೋರಾಟದಲ್ಲಿ ಭಾಗವಹಿಸಲು ಬಹಳ ಉತ್ಸುಕರಾಗಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ನಿಗದಿಯಾಗಿದ್ದ ರಾಹುಲ್ ಗಾಂಧಿ ಅವರ ಮಾಧ್ಯಮಗೋಷ್ಠಿಯನ್ನು ಕೂಡ ಮುಂದೂಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನಂತರ ಇದರ ಬಗ್ಗೆ ಚರ್ಚಿಸಿ ಮಾಹಿತಿಯನ್ನು ಅವರು ತಿಳಿಸಲಿದ್ದಾರೆ ಎಂದು ತಿಳಿಸಿದರು.

ಶಿಬು ಸೊರೇನ್ ಅವರು ಕಷ್ಟ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ನರಸಿಂಹ ರಾವ್ ಅವರ ಕಾಲ ಸೇರಿದಂತೆ ಎಲ್ಲಾ ಸಮಯದಲ್ಲೂ ಕಾಂಗ್ರೆಸ್ ಪಕ್ಷದ ಪರ ಬಂಡೆಯಂತೆ ನಿಂತದ್ದರು. ಪಕ್ಷದ ಸಿದ್ಧಾಂತದ ಜೊತೆ ನಿಂತು ನಮ್ಮ ಸರ್ಕಾರಕ್ಕೆ ಅವರು, ಅವರ ಸರ್ಕಾರಕ್ಕೆ ನಾವು ಬೆಂಬಲವಾಗಿ ನಿಂತಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos