ಹಾರೋಹಳ್ಳಿ: ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯ ಬೆಳದಂತೆಲ್ಲ ಕೆರೆ, ಹಳ್ಳಕೊಳ್ಳಗಳು ಮಾಯವಾಗುತ್ತಿವೆ. ಅದರಂತೆ ಹಾರೋಹಳ್ಳಿಯಲ್ಲಿ ಕೂಡ ಕೆರೆ ನೀರು ವಿಷಕಾರಿಯಾಗಿ ಹೊರಹೊಮ್ಮುತ್ತಿದೆ.
ಹೌದು, ಸ್ಥಳಿಯ ಕಾರ್ಖಾನೆಗಳು ತಮ್ಮ ತ್ಯಾಜ್ಯಗಳನ್ನು ಕೆರೆಗಳಿಗೆ ಬಿಡುವುದರಿಂದ ಶುದ್ಧ ಕೆರೆಗಳೆಲ್ಲ ಇದೀಗ ವಿಷಕಾರಿ ತುಂಬಿದ ಕೆರೆಗಳಾಗಿವೆ.
ಇನ್ನು ಕಾರ್ಖಾನೆ ವಿಷಕಾರುವ ತ್ಯಾಜ್ಯವನ್ನು ಚರಂಡಿಯಲ್ಲಿ ವಿಲೇವಾರಿ ಮಾಡುತ್ತಿದ್ದು ಅಧಿಕಾರಿಗಳು ಚಾಟಿ ಬೀಸಿದ್ದಾರೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 2ನೇ ಹಂತದ ಹಾರಿಜನ್ ಪ್ಯಾಕೇಜಿಂಗ್ ಕಾರ್ಖಾನೆಗೆ ದಿಢೀರ್ ತಹಸೀಲ್ದಾರ್ ಹಾಗೂ ಜಿಲ್ಲಾ ಪರಿಸರ ಇಲಾಖೆ ಅಧಿಕಾರಿ ಭೇಟಿ ನೀಡಿ ನಿಯಮ ಮೀರಿ ಕಾರ್ಖಾನೆ ತ್ಯಾಜ್ಯ ಸರಿಯಾಗಿ ನಿರ್ವಹಣೆ ಮಾಡದೆ ಬೇಕಾಬಿಟ್ಟಿಯಾಗಿ ಚರಂಡಿ ಮೂಲಕ ಹೊರಗೆ ಬೀಡುತ್ತಿದ್ದು ಇದರ ಬಗ್ಗೆ ಹಲವು ಬಾರಿ ಸಾರ್ವಜನಿಕ ದೂರು ಬಂದು ಎಚ್ಚರಿಕೆ ಕೂಡ ನೀಡಲಾಗಿದ್ದರು ಸಹ ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳದೆ ಅಸಡ್ಡೆ ತೋರಿದ್ದು ಸರಿಯಲ್ಲ ಎಂದು ಜಿಲ್ಲಾ ಪರಿಸರ ಇಲಾಖೆ ಅಧಿಕಾರಿ ಮಂಜುನಾಥ್ ಖಡಕ್ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಆರ್ ಸಿ ಶಿವಕುಮಾರ್ ಮಾತನಾಡಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳು ನಿಯಮ ಪಾಲನೆ ಮಾಡದೇ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡುತ್ತಿದ್ದು ಸಂಬಂಧಪಟ್ಟ ಇಲಾಖೆಗಳು ಪರವಾನಗಿ ನೀಡುವಾಗ ಸರ್ಕಾರದ ನೀತಿ ನಿಯಮ ಪಾಲಿಸುವಂತೆ ಷರತ್ತು ವಿಧಿಸಲಾಗುತ್ತದೆ. ಆದರೆ, ಕೈಗಾರಿಕಾ ಪ್ರದೇಶದ ಬಹುತೇಕ ಕಾರ್ಖಾನೆಗಳು ಇಟಿಪಿ ಪ್ಲಾಂಟ್ ಮಾಡಿಕೊಳ್ಳದೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿವೆ. ಈ ಬಗ್ಗೆ ದೂರುಗಳು ಕೇಳಿ ಬಂದಿದ್ದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಪರೀಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ತಗೆದುಕೊಳ್ಳಲಾಗುವುದು ಎಂದರು.
ವಿಷವಾದ ಕೆರೆ ನೀರು: ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಉಳಗೊಂಡನಹಳ್ಳಿ, ಸುವರ್ಣಮುಖಿ ಹಳ್ಳ, ಹನುಮೇಗೌಡನದೊಡ್ಡಿ ಬೋಚಯ್ಯನ ಕೆರೆ, ದೇವರಕಗ್ಗಲಹಳ್ಳಿ ಕೆರೆ, ಬನ್ನಿಕುಪ್ಪೆ ಕೆರೆಗಳು ಹಾಳಾಗಿವೆ. ಪರಿಸರ ಇಲಾಖೆ ಸೂಕ್ತ ಕ್ರಮಕೈಗೊಳ್ಳುಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಯನಿರ್ವಾಹಕ ಎಂಜಿನಿಯರ್ ಲೀಲಾವತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾಬಾಯಿ, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.