ರಾಜಕೀಯ ಜೀವನದುದ್ದಕ್ಕೂ ಸೇಡು, ಸಂಚುಗಾರರನ್ನ ನೋಡಿದ್ದೇನೆ: ಸಿಎಂ

ರಾಜಕೀಯ ಜೀವನದುದ್ದಕ್ಕೂ ಸೇಡು, ಸಂಚುಗಾರರನ್ನ ನೋಡಿದ್ದೇನೆ: ಸಿಎಂ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಟ್ ಅರ್ಜಿ ಸಲ್ಲಿಸಿದ್ದು ಇದೀಗ ಹೈಕೋರ್ಟ್ ಸಿಎಂ ಸಲ್ಲಿಸಿದ ರೀಟ್ ಅರ್ಜಿಯನ್ನು ವಜಾ ಗೊಳಿಸಿ ಆದೇಶ ಹೊರಡಿಸಿದೆ.

ಇನ್ನು ಈ ಕುರುತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17 ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ. ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ. ಕಾನೂನು ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ.

ದೂರುದಾರ ತನ್ನ ದೂರಿನಲ್ಲಿ ಸೆಕ್ಷನ್ 218 ಬಿಎನ್ ಎಸ್ ಎಸ್, 17 ಎ ಮತ್ತು 19 ಪಿಸಿ ಕಾಯಿದೆ ಪ್ರಕಾರ ತನಿಖೆ ಹಾಗೂ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದರು. ಆದರೆ, ರಾಜ್ಯಪಾಲರು ಪ್ರಾಥಮಿಕ ಹಂತದಲ್ಲಿ 19 ಪಿಸಿ ಕಾಯಿದೆ ಪ್ರಕಾರ ಕೇಳಿದ್ದ ಅಭಿಯೋಜನಾ ಅನುಮತಿ‌ ನಿರಾಕರಿಸಿದ್ದರು. ಈ ದಿನ ಘನ ನ್ಯಾಯಾಲಯ ರಾಜ್ಯಪಾಲರು 218 ಬಿಎನ್ ಎಸ್ ಎಸ್ ಪ್ರಕಾರ ನೀಡಿರುವ ಅಭಿಯೋಜನಾ ಅನುಮತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ.  ಮುಂದಿನ ದಿನಗಳಲ್ಲಿ ಸತ್ಯ ಹೊರಬಂದು 17 ಎ ಅಡಿ ನೀಡಿರುವ ತನಿಖೆ ರದ್ದಾಗಲಿದೆ ಎಂಬ ದೃಢ ವಿಶ್ವಾಸ ನನಗಿದೆ ಎಂದಿದ್ದಾರೆ.

ಇನ್ನು ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಕಾನೂನು ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ. ಇದು ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯದ ವಿರುದ್ದದ ಹೋರಾಟ ಎಂದರು. ಇದನ್ನೂ ಓದಿ: ಸಿಎಂಗೆ ಬಿಗ್‌ ಶಾಕ್‌ ನೀಡಿದ ಹೈಕೋರ್ಟ್

ಬಿಜೆಪಿ, ಜೆಡಿಎಸ್ ನ ಈ ಸೇಡಿನ ರಾಜಕೀಯದ ವಿರುದ್ದ ನಮ್ಮ ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ನಮ್ಮ ಪಕ್ಷದ ಎಲ್ಲ ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿ ಭದ್ರವಾಗಿ ನಿಂತಿದ್ದು ಕಾನೂನಿನ ಹೋರಾಟ ಮುಂದುವರಿಸುವಂತೆ ಉತ್ತೇಜನ ನೀಡಿದ್ದಾರೆ. ನಾನು ಬಡವರ ಪರವಾಗಿದ್ದೇನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ ನನ್ನ ವಿರುದ್ದ ಬಿಜೆಪಿ, ಜೆಡಿಎಸ್ ರಾಜಕೀಯ ಪ್ರತಿಕಾರಕ್ಕೆ ಇಳಿದಿದೆ.

ನನ್ನ 40 ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಇಂತಹ ಸೇಡು, ಸಂಚಿನ ರಾಜಕೀಯವನ್ನು ಎದುರಿಸಿದ್ದೇನೆ ಮತ್ತು ರಾಜ್ಯದ ಜನರ ಆಶೀರ್ವಾದ, ಹಾರೈಕೆಯ ಬಲದಿಂದ ಗೆಲ್ಲುತ್ತಾ ಬಂದಿದ್ದೇನೆ. ಈ ಹೋರಾಟವನ್ನು ಜನತೆಯ ಆಶೀರ್ವಾದದ ಬಲದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಮುಡಾ ಪ್ರಕರಣ ಒಂದು ನೆಪ ಅಷ್ಟೇ. ಬಡವರು ಮತ್ತು ಶೋಷಿತರ ಪರವಾಗಿರುವ ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕೆಂಬುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯ ಉದ್ದೇಶವಾಗಿದೆ ಎಂದು ಗುಡುಗಿದರು.

ಮುಡಾ ಪ್ರಕರಣವನ್ನು ಸೃಷ್ಟಿಸಿ, ಅದರ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ಮುಖಗಳನ್ನು ಒಮ್ಮೆ ರಾಜ್ಯದ ಜನತೆ ಸರಿಯಾಗಿ ನೋಡಬೇಕೆಂದು ನಾನು ಮನವಿ ಮಾಡುತ್ತೇನೆ.

ನನ್ನ ರಾಜೀನಾಮೆ ಕೇಳುತ್ತಿರುವ ಇದೇ ನಾಯಕರು ನಾನು ರಾಜ್ಯದ ಬಡವರು, ಶೋಷಿತರ ಪರವಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ವಿರೋಧಿಸಿದವರೇ ಆಗಿದ್ದಾರೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos