ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗುಡಿಗೇರಿ ಕಾಲೋನಿಯಲ್ಲಿರುವ ಹುತಾತ್ಮ ಯೋಧ ಹೆಚ್. ಗುರು ನಿವಾಸಕ್ಕೆ ನಟ ಪ್ರಕಾಶ್ ರೈ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ದೇಶ ಸೇವೆಗಾಗಿ ಮಗನನ್ನು ಮೀಸಲಿಟ್ಟಿದ್ದಾರೆ. ನಿಮ್ಮ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದು ಅವರು ಗುರು ಕುಟುಂಬದವರಿಗೆ ತಿಳಿಸಿದ್ದಾರೆ.
ಉಗ್ರರ ದಾಳಿ ಕುರಿತಾಗಿ ಮಾತನಾಡಿದ ಅವರು, ಘಟನೆಯನ್ನು ಎಲ್ಲರೂ ಪಕ್ಷಾತೀತವಾಗಿ ಖಂಡಿಸಬೇಕು. ಈ ವಿಚಾರದಲ್ಲಿ ಪ್ರಧಾನಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧವಾಗಿದ್ದೇವೆ. ಭಾರತೀಯ ಸೇನೆ ಜೊತೆ ನಾವೆಲ್ಲ ನಿಲ್ಲಬೇಕಿದೆ ಎಂದು ಹೇಳಿದ್ದಾರೆ.
ಈ ಘಟನೆಯಿಂದಾಗಿ ನಾವೆಲ್ಲರೂ ಪಾಠ ಕಲಿಯಬೇಕು. ಕೇವಲ ಭಾವನಾತ್ಮಕ ಮಾತುಗಳಿಗೆ ಸೀಮಿತವಾಗಬಾರದು. ಒಂದು ವಾರದ ಬಳಿಕ ಮತ್ತೆ ಗುರು ನಿವಾಸಕ್ಕೆ ಬರುತ್ತೇನೆ. ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.