ಬೆಂಗಳೂರು: ಸ್ವಾಮೀಜಿಗಳು ಕೃಷ್ಣನಂತೆ ಅವರು ಪಾಂಡವರಂತೆ ಇರುವ ಜೆಡಿಎಸ್ ಪರವಾಗಿ ನಿಲ್ಲಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಜೆಡಿಎಸ್ ಎಲ್ಲಿದೆ? ಜೆಡಿಎಸ್ ಗೆ ಅವರೇ ಮುಕ್ತಿ ಕೊಟ್ಟಿದ್ದಾರೆ. ಜೆಡಿಎಸ್ ಇರಬೇಕು ಎಂಬ ಆಸೆ ನನಗಿದೆ. ಆದರೆ ಅಳಿಯನನ್ನೇ ಬಿಜೆಪಿಗೆ ಕಳುಹಿಸಿ ಜೆಡಿಎಸ್ ವಿಸರ್ಜನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ನಾವು ಹಿಂದೆ ಒಂದು ತಪ್ಪು ಮಾಡಿದ್ದೆವು. ಆದರೆ ಈಗ ಅದಕ್ಕಿಂತ ದೊಡ್ಡ ತಪ್ಪು ಜೆಡಿಎಸ್ ನವರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಒಕ್ಕಲಿಗರಾಗಲಿ, ಬೇರೆ ಸಮುದಾಯದವರಾಗಲಿ ಯಾರೂ ದಡ್ಡರಲ್ಲ. ತಮಗೆ ಯಾರು ಅನುಕೂಲ ಮಾಡಿಕೊಡಲಿದ್ದಾರೆ ಹಾಗೂ ದೇಶಕ್ಕೆ ಯಾರು ಸೂಕ್ತ ಎಂದು ನೋಡುತ್ತಾರೆ. ತಮಗೆ, ರಾಜ್ಯಕ್ಕೆ, ದೇಶಕ್ಕೆ ಯಾರು ಉತ್ತಮರು ಎಂದು ಜನ ಆಲೋಚನೆ ಮಾಡುತ್ತಾರೆ. ಜನ ಅವರ ಬದುಕು ನೋಡುತ್ತಾರೆ ಹೊರತು, ಭಾವನೆ ನೋಡುವುದಿಲ್ಲ” ಎಂದರು.
ಮೈತ್ರಿ ನಾಯಕರು ಆದಿಚುಂಚನಗಿರಿ ಸ್ವಾಮೀಜಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು,ಸ್ವಾಮೀಜಿಗಳು ಉತ್ತರ ನೀಡಬೇಕು ಎಂದು ನಾನು ಕೇಳಿಲ್ಲ. ಕುಮಾರಸ್ವಾಮಿ ಹಾಗೂ ಕೆಲವು ಮಂತ್ರಿಗಳು ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವ ವೇಳೆಗೆ ಆಪರೇಷನ್ ಕಮಲ ನಡೆದಿತ್ತು.