ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಸೆಕೆ ತಡೆದುಕೊಳ್ಳಲಾಗದೆ ಬಳಲಿ ಬೆಂಡಾಗುತ್ತಿದ್ದೇವೆ. ಪ್ರಸ್ತುತ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2 ರಿಂದ 3 ಡಿಗ್ರಿಗಳಷ್ಟು ಅಧಿಕ ತಾಪಮಾನ ದಾಖಲಾಗುತ್ತಿದ್ದು, ದಿನದಿಂದ ದಿನಕ್ಕೆ ಬಿಸಿಲಿನ ಬೇಗೆಗೆ ಜನರು ಹೈರಾಣಾಗಿದ್ದರು.
ಅಂತೂ ಕರ್ನಾಟದಲ್ಲಿ ಮಳೆಯ ಅಬ್ಬರ ಶುರುವಾಗಿದ್ದು, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಈ ಮೂಲಕ ಜನರಿಗೆ ಒಂದಷ್ಟು ನೆಮ್ಮದಿ ಸಿಕ್ಕಿದೆ. ಸುಮಾರು ಒಂದೂವರೆ ತಿಂಗಳಿಂದ ಭಾರಿ ಬಿಸಿಲಿನ ಬೇಗೆಯಲ್ಲಿ ಬೆಂದು ಹೋಗಿರುವ ನಮ್ಮ ಕನ್ನಡ ನಾಡಿಗೆ ಮಳೆ ಒಂದಷ್ಟು ರಿಲೀಫ್ ನೀಡಿದೆ.
ಮಳೆ.. ಮಳೆ.. ಮಳೆ.. ಹೀಗೆ ಮಳೆಗಾಗಿ ಕಾದು ಕುಳಿತಿದ್ದ ಕನ್ನಡಿಗರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ನಿನ್ನೆ ಕೊಡಗು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬಿದ್ದಿದೆ. ಹಾಗೇ ಇದೇ ಸಮಯದಲ್ಲಿ ಮುಂದಿನ ಕೆಲವೇ ದಿನದಲ್ಲಿ ಮಳೆ ವಿಚಾರದಲ್ಲಿ ಭರ್ಜರಿ ಸಿಹಿಸುದ್ದಿ ಸಿಗುವುದು ಪಕ್ಕಾ ಆಗಿದೆ.
ಏಪ್ರಿಲ್ 12 ರಿಂದ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆಯಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಇದು ಕನ್ನಡಿಗರಿಗೆ ಭರ್ಜರಿ ಸುದ್ದಿ ಕೊಟ್ಟಂತಾಗಿದೆ.
ಹವಾಮಾನ ಮುನ್ಸೂಚನೆ ಮಾಹಿತಿ ನೀಡುವಂತೆ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 2ನೇ ವಾರದಿಂದಲೇ ಮಳೆಯಾಗಲಿದೆ ಅಂತಾ ಹೇಳಲಾಗಿದೆ. ಇದು ಒಂದು ಕಡೆಯಾದರೆ ಈಗಾಗಲೇ, ಕಾವೇರಿ ನದಿ ತವರು ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಮಳೆ ಬಿದ್ದಿದೆ. ನಿನ್ನೆ ಕೂಡ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಿದ್ದಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.