ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಆರಂಭಕ್ಕೂ ಮುನ್ನ RCB ಯಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.
ಹೌದು, ಈ ಬಾರಿ ಆರ್ಸಿಬಿ ತಂಡವು ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿ ಕಣಕ್ಕಿಳಿಯಲಿದೆ. ಮಾರ್ಚ್ 19 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಆರ್ಸಿಬಿ ತಂಡದ ಹೆಸರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಘೋಷಣೆಯಾಗಲಿದೆ ಎಂದು ವರದಿಯಾಗಿದೆ.
ಈ ಹಿಂದಿನಿಂದಲೂ ಆರ್ಸಿಬಿ ಅಭಿಮಾನಿಗಳು ಬ್ಯಾಂಗಲೂರ್ ಬದಲಿಗೆ ಬೆಂಗಳೂರು ಬಳಸುವಂತೆ ಸೋಷಿಯಲ್ ಮೀಡಿಯಾ ಮೂಲಕ ಮನವಿ ಸಲ್ಲಿಸುತ್ತಾ ಬಂದಿದ್ದರು. ಇದೀಗ ಅಭಿಮಾನಿಗಳ ಬಹುಕಾಲದ ಈ ಬೇಡಿಕೆಯನ್ನು ಈಡೇರಿಸಲು ಆರ್ಸಿಬಿ ಫ್ರಾಂಚೈಸಿ ಮುಂದಾಗಿದೆ. ಈ ಮೂಲಕ ಹೊಸ ಹೆಸರಿನೊಂದಿಗೆ ಐಪಿಎಲ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಬಹುನಿರೀಕ್ಷಿತ ಐಪಿಎಲ್ನ 17ನೇ ಆವೃತ್ತಿ ಮಾರ್ಚ್ 22 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಆರ್ಸಿಬಿ ಐಪಿಎಲ್ ಅಭಿಯಾನ ಆರಂಭಿಸಲಿದೆ.