ಬೆಂಗಳೂರು: ಮುಂದಿನ 9 ವರ್ಷಗಳ ಕಾಲ ನಾವೇ ಅಧಿಕಾರದಲ್ಲಿ ಇರುತ್ತೇವೆ. ನಿಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುವುದು. ನಾವೇ ಪರಿಹಾರ ನೀಡುವುದು. ಈ ವಿಚಾರ ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಅರಮನೆ ಮೈದಾನದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಸಮ್ಮೇಳನದಲ್ಲಿ ಮಾತನಾಡಿ, ಯಾವುದೇ ಸರ್ಕಾರ ಬಂದರೂ ರಾಜಕೀಯದವರ ಸಹವಾಸ ಮಾಡಬೇಡಿ. ರಾಜಕೀಯದಿಂದರ ದೂರವಿರಿ. ಗುತ್ತಿಗೆದಾರರಿಗೆ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕಿರುಕುಳ ಇರುವುದು ನನ್ನ ಗಮನದಲ್ಲಿದೆ. ಗುತ್ತಿಗೆದಾರರು ಇಲ್ಲದೇ ಸರ್ಕಾರ ನಡೆಸಲು ಸಾಧ್ಯವಿಲ್ಲ. ನಾವು ಸರ್ಕಾರ ನಡೆಸುತ್ತೇವೆ, ನೀವು ಕಾಮಗಾರಿ ನಡೆಸುತ್ತೀರ. ಈ ಎರಡೂ ದೇಶದ ಕೆಲಸಗಳು. ರಾಜ್ಯದ ಅಭಿವೃದ್ಧಿಯ ಭಾಗಗಳು ನೀವೆಲ್ಲ ಎಂದು ಹೇಳಿದರು.
ದೊಡ್ಡ, ದೊಡ್ಡ ಗುತ್ತಿಗೆದಾರರು ಬೃಹತ್ ಮೊತ್ತದ ಪ್ಯಾಕೇಜ್ ಯೋಜನೆಗಳನ್ನು ತೆಗೆದುಕೊಂಡು ತುಂಡು ಗುತ್ತಿಗೆಯಾಗಿ ಸಣ್ಣವರಿಗೆ ನೀಡುತ್ತಿದ್ದಾರೆ. ಈ ಮಾಫಿಯಾವನ್ನು ಪ್ರಾರಂಭ ಮಾಡಿದ್ದೇ ಅಧಿಕಾರಿಗಳು. ಭ್ರಷ್ಟಾಚಾರದ ಭೂತ ನಿಮಗೂ ಅಂಟಿದೆ, ನಮಗೂ ಅಂಟಿದೆ. ಆದರೆ ಈ ಭ್ರಷ್ಟಾಚಾರದ ಭೂತ ನಿಮಗೂ ಅಂಟಿದೆ, ನಮಗೂ ಅಂಟಿದೆ. ಇಬ್ಬರೂ ಈ ಕಷ್ಟದಿಂದ ಪಾರಾಗಬೇಕಿದೆ.
ಗುತ್ತಿಗೆದಾರರ ಎಲ್ಲಾ ಬೇಡಿಕೆಗಳು ಸರ್ಕಾರದ ಗಮನದಲ್ಲಿದೆ. ನೀವು ಹಣವನ್ನು ಬಡ್ಡಿಗೆ ತಂದು, ಮೀಟರ್ ಬಡ್ಡಿ ಕಟ್ಟುತ್ತಾ, ಆಸ್ತಿಗಳನ್ನು ಅಡವಿಟ್ಟು ಕಾಮಗಾರಿಗಳನ್ನು ಮಾಡಿರುತ್ತೀರ. ನಿಮ್ಮ ಕಷ್ಟ ಸರ್ಕಾರದ ಗಮನದಲ್ಲಿದೆ. ಎರಡು, ಮೂರು ದಿನಗಳಲ್ಲಿ ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾಗುವ ಸಂಭವವಿದೆ. ಚುನಾವಣೆ ನಂತರ ನಿಮ್ಮ ಬೇಡಿಕೆಗಳ ಬಗ್ಗೆ ಗಮನ ನೀಡಲಾಗುವುದು. ನಮ್ಮ, ನಿಮ್ಮ ಸಂಬಂಧ ಹಾಲು ಜೇನನಂತೆ. ಹಾಲನ್ನು ಕುಡಿಯದೇ ಇರಲು, ಜೇನು ಸವಿಯದೇ ಇರಲು ಸಾಧ್ಯವಿಲ್ಲ. ಒಟ್ಟಿಗೆ ಕುಳಿತು ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳೋಣ ಎಂದು ಹೇಳಿದರು.