ಆರ್​ಸಿಬಿ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯ

ಆರ್​ಸಿಬಿ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯ

ಬೆಂಗಳೂರು: ದಿನೇ ದಿನೇ ಬೆಳವಣಿಗೆ ಕಾಣುತ್ತಿರುವ ಮಹಿಳಾ ಕ್ರಿಕೆಟ್ ಲೀಗ್ ತನ್ನ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ನಿನ್ನೆ ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ ನ 7ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿತ್ತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 ರ ಏಳನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ 25 ರನ್​ಗಳಿಂದ ಮಣಿಸಿದೆ. ಈ ಮೂಲಕ ಆರ್​ಸಿಬಿ ಲೀಗ್​ನಲ್ಲಿ ತನ್ನ ಮೊದಲ ಸೋಲನ್ನು ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 194 ರನ್ ಕಲೆಹಾಕಿತು. ಈ ಮೂಲಕ ಆರ್​ಸಿಬಿಗೆ 195 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ಇತ್ತ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ತಂಡ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿಗೆ ಮೊದಲ ವಿಕೆಟ್​ಗೆ 28 ರನ್​ಗಳ ಜೊತೆಯಾಟ ಬಂತು. ನಾಯಕಿ ಮೆಗ್ ಲ್ಯಾನಿಂಗ್ 11 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಆರಂಭದಲ್ಲಿ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಶಫಾಲಿ ವರ್ಮಾ 31 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ಸಹಿತ ಅರ್ಧಶತಕ ಸಿಡಿಸಿದರು. ಆಲಿಸ್ ಕ್ಯಾಪ್ಸಿ ಕೂಡ 46 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮರಿಜಾನ್ನೆ ಕೆಪ್ ಹಾಗೂ ಜೆಸ್ ಜೊನಾಸೆನ್ ತಲಾ 16 ಎಸೆತಗಳಲ್ಲಿ ಕ್ರಮವಾಗಿ 32 ಹಾಗೂ 36 ರನ್ ಕಲೆಹಾಕಿ ತಂಡವನ್ನು ಬೃಹತ್ ಟಾರ್ಗೆಟ್​ನತ್ತ ಕೊಂಡೊಯ್ದರು.

ಈ ಬೃಹತ್ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ಸ್ಮೃತಿ ಮಂಧಾನ ಹಾಗೂ ಸೋಫಿ ಡಿವೈನ್ 71 ರನ್​ಗಳ ಜೊತೆಯಾಟ ನೀಡಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ ನೋಡಿದವರು ಆರ್​ಸಿಬಿಗೆ ಗೆಲುವು ಖಚಿತ ಎಂದು ಬಾವಿಸಿದ್ದರು. ಆದರೆ ಸೋಫಿ ಔಟಾದ ಬಳಿಕ ತಂಡದ ರನ್ ರೇಟ್ ಕುಸಿಯಲ್ಲಾರಂಬಿಸಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಸ್ಮೃತಿ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 74 ರನ್ ಕಲೆಹಾಕಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಒಂದೆಡೆ ನಾಯಕಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದರೆ, ಮೇಘನಾ ಆಮೆಗತಿಯ ಬ್ಯಾಟಿಂಗ್ ಮಾಡಿದರು. ಹೀಗಾಗಿ ತಂಡ ಒತ್ತಡಕ್ಕೆ ಸಿಲುಕಿತು. ಅಂತಿಮವಾಗಿ ತಂಡ ಲೀಗ್​ನಲ್ಲಿ ತನ್ನ ಮೊದಲ ಸೋಲನ್ನು ಎದುರಿಸಬೇಕಾಯಿತು.

 

 

ಫ್ರೆಶ್ ನ್ಯೂಸ್

Latest Posts

Featured Videos