ಬೆಂಗಳೂರು: ರಾಜ್ಯದ ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇತ್ತೀಚಿಗೆ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹದ ಸಾಲುಗಳನ್ನು ಬೇರೆ ರೀತಿಯಲ್ಲಿ ಬರೆದು ಬಿ.ಜೆ.ಪಿ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ ಮತ್ತೊಂದು ವಿವಾದ ಆದೇಶ ಹೊರಡಿಸಿದೆ.
ಈ ಸುತ್ತೋಲೆಯನ್ನು ರಾಜ್ಯ ಸರ್ಕಾರ ಫೆಬ್ರವರಿ 16ರಂದು ವರಡಿಸಿರುವುದು ಇದೀಗ ಬೆಳಕಿಗೆ ಬಂದಿದೆ ರಾಜ್ಯ ಸರ್ಕಾರದ ಈ ನಡೆ ಕೂಡ ಬಾರಿ ವಿರೋಧಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಸರ್ಕಾರದ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಈಗಾಗಲೇ ಕಿಡಿ ಕಾರುತ್ತಿದ್ದ ಬಿಜೆಪಿಗೆ ಮತ್ತೊಂದು ಅತ್ರ ಸಿಕ್ಕಿದಂತಾಗಿದೆ.
ರಾಷ್ಟ್ರ ಕವಿ, ಜ್ಞಾನಪೀಠ ಪುರಸ್ಕೃತ ಡಾ. ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಹಾಗೂ ಅದಕ್ಕೆ ಫೆಬ್ರವರಿ 1ರಂದು ಮಾಡಲಾದ ತಿದ್ದುಪಡಿ ಪ್ರಕಾರ, ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದರ ಬದಲಾಗಿ, ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂಬುದಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಮೇಲಿನ ಸುತ್ತೋಲೆಯಲ್ಲಿ ‘ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯನ್ನು ಹಾಡುವುದು’ ಎಂಬುದರ ಬದಲಾಗಿ, ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ’ ಎಂದು ಬದಲಾಯಿಸಲಾಗಿದೆ. ಹೀಗಾಗಿ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥ ಬರುತ್ತದೆ. ಹಾಗೆಂದು, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡಬಾರದು ಎಂದು ಸರ್ಕಾರದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿಲ್ಲ ಎಂಬುದೂ ಗಮನಾರ್ಹ.