ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದೆ. ವಿಶೇಷವೆಂದರೆ 2023ರ ಏಕದಿನ ವಿಶ್ವಕಪ್ ಬಳಿಕ ಟಿ20 ಪಂದ್ಯಗಳಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದ ನಾಯಕ ರೋಹಿತ್ ಶರ್ಮಾ ಅವರಿಗೆ ಮತ್ತೆ ಟಿ20 ಪಂದ್ಯಗಳಿಗೆ ನಾಯಕತ್ವದ ಹೊಣೆ ನೀಡಲಾಗಿದೆ.
ರೋಹಿತ್ ಮತ್ತು ವಿರಾಟ್ ಕೊಹ್ಲಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ನಿರಂತರವಾಗಿ ಆಡುತ್ತಿದ್ದರು. ಹಲವು ತಿಂಗಳಿನಿಂದ ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಚುಟುಕು ಸ್ವರೂಪಕ್ಕೆ ಇವರಿಬ್ಬರನ್ನು ಆಯ್ಕೆ ಮಾಡುವ ಕುರಿತು ಸಾಕಷ್ಟು ಊಹಾಪೋಹಗಳು ಇದ್ದವು. ಈ ನಡುವೆ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಗಾಯದಿಂದಾಗಿ ಆಯ್ಕೆಗೆ ಲಭ್ಯರಿಲ್ಲ. ಹೀಗಾಗಿ ರೋಹಿತ್ ಮತ್ತು ಕೊಹ್ಲಿಯನ್ನು ತಂಡದಲ್ಲಿ ಹಿರಿಯ ಬ್ಯಾಟರ್‌ಗಳಾಗಿ ಬಿಸಿಸಿಐ ತಂಡಕ್ಕೆ ವಾಪಸ್ ಕರೆಸಿಕೊಂಡಿದೆ.