ಬೆಂಗಳೂರು,ಸೆ.29: ಕಾವೇರಿ ವಿಚಾರವಾಗಿ ಸತತವಾಗಿ ಹೋರಾಟ, ಬಂದ್ ನಡೆಯುತ್ತಿರುವ ಹಿನ್ನೆಲೆ ಹಾಗೂ ಶುಕ್ರವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಪುನರ್ ಪರಿಶೀಲನಾ ಸಭೆ ನಡೆಯುತ್ತಿರುವುದರಿಂದ ಕಾವೇರಿ ವಿಚಾರವಾಗಿ ಕಾನೂನು ಹೋರಾಟ ತೀವ್ರಗೊಳಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು, ಇಂದು ಹಿರಿಯ ವಕೀಲರು ಹಾಗೂ ಕಾನೂನು ತಜ್ಞರ ಸಭೆ ಕರೆದಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಬಂಧಪಟ್ಟ ಸಚಿವರ ಉಪಸ್ಥಿತಿಯಲ್ಲಿ ನಿವೃತ್ತ ನ್ಯಾಯಾಧೀಶರು, ಅಡ್ವಕೇಟ್ ಜನರಲ್, ಹಿರಿಯ ವಕೀಲರು ಸೇರಿದಂತೆ ಕಾನೂನು ತಜ್ಞರ ಸಭೆ ಕರೆಯಲಾಗಿದೆ.
ಶುಕ್ರವಾರ ಬೆಳಗ್ಗೆಯಿಂದಲೇ 2-3 ಹಂತದಲ್ಲಿ ಸಭೆ ನಡೆಯಲಿದ್ದು, ಕಾವೇರಿ ನೀರು ನಿರ್ವಹಣಪ್ರಾಧಿಕಾರ ನೀಡುವ ಆದೇಶದ ಮೇಲೆ ಹೋರಾಟ ನಡೆಸುವ ಸಲುವಾಗಿ ಸಂಜೆ ಮತ್ತೊಮ್ಮೆ ಕಾನೂನು ತಜ್ಞರೊಂದಿಗೆ ಅಂತಿಮ ಸಭೆ ನಡೆಸುವ ಸಾಧ್ಯತೆಯಿದೆ. ಎಂದು ಮೂಲಗಳು ತಿಳಿಸಿವೆ.
ತಜ್ಞರ ಅಭಿಪ್ರಾಯದಂತೆ ಮುಂದಿನ ಕಾನೂನು ಹೋರಾಟದ ಬಗ್ಗೆ ಸಲಹೆ ಪಡೆಯಲಿದ್ದಾರೆ, ಅದರ ಆಧಾರದ ಮೇಲೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಅಗತ್ಯ ಹೋರಾಟ ನಡೆಸಲಿದ್ದಾರೆ ಎಂದು ಮೂಲಗಳು
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಕಾವೇರಿ ವಿಚಾರದಲ್ಲಿ ಮುಂದಿನ ಹೋರಾಟದ ಕುರಿತು ಚರ್ಚಿಸಲು ಹಿರಿಯ ಕೃಷಿ ತಜ್ಞರು, ನೀರಾವರಿ ತಂತ್ರಜ್ಞರು, ಕಾನೂನು ತಜ್ಞರ ಸಭೆ ಕರೆಯಲಾಗಿದೆ. ಯಾರು ಭಾಗವಹಿಸುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಹೇಳಿದರು.