ಬೆಂಗಳೂರು : ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆ ಮಾಡಿದೆ ಸಿಎಂ ಕುಮಾರಸ್ವಾಮಿ ವಿರುದ್ಧ ಅದೆಲ್ಲ ಸುಳ್ಳು ಎಂದು ಕೆಂಡಾಮಂಡರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಈಗ, ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಬಿಡುಗಡೆ ಮಾಡಿದ ‘ಆಪರೇಷನ್ ಆಡಿಯೋ’ದಲ್ಲಿ ಇರುವುದೇ ನನ್ನದೇ ಧ್ವನಿ ಎಂದು ಒಪ್ಪಿಕೊಂಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಯಡಿಯೂರಪ್ಪ, ನಾನು ದೇವದುರ್ಗಕ್ಕೆ ಹೋಗಿದ್ದು ನಿಜ. ಶರಣ ಗೌಡರ ಜೊತೆ ಮಾತನಾಡಿದ್ದು ನಿಜ. ಆಡಿಯೋದಲ್ಲಿರುವುದು ನನ್ನದೇ ಧ್ವನಿ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಕುತಂತ್ರದ ರಾಜಕಾರಣ ಮಾಡಿದ್ದಾರೆ. ಅವರಿಗೆ ಬೇಕಾದ ಆಡಿಯೋವನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದರು.
ಮುಂದುವರಿದು ಮಾತನಾಡಿದ ವಿಪಕ್ಷ ನಾಯಕ ಯಡಿಯೂರಪ್ಪ, ಯಾವುದೇ ತನಿಖೆಗೆ ಸಿದ್ಧನಿದ್ದೇನೆ, ಅಲ್ಲಿ ನಡೆದ ಪೂರ್ಣ ಸಂಭಾಷಣೆ ನನ್ನಲ್ಲಿದೆ. ಕುಮಾರಸ್ವಾಮಿ ಅವರಿಗೆ ಬೇಕಾದ ಆಡಿಯೋ ಭಾಗವನ್ನು ಬಿಡುಗಡೆ ಮಾಡಿದ್ದಾರೆ. ಸಂಪೂರ್ಣ ಆಡಿಯೋವನ್ನು ನಾನು ಸೋಮವಾರ ಸದನದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಮತ್ತೊಂದು ಬಾಂಬ್ ಹಾಕಿದ್ದಾರೆ. ಯಡಿಯೂರಪ್ಪ ಈ ಹೇಳಿಕೆ ರಾಜ್ಯ ರಾಜಕಾರಣದ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ ಎಂದು ಹೇಳಬಹುದು.