ಕುಣಿಗಲ್:ಕಷ್ಟದಲ್ಲಿರುವ ಪತ್ರಕರ್ತರಿಗೆ ಇನ್ನೊಬ್ಬ ಪತ್ರಕರ್ತರು ನೆರವಾಗುವುದು ನಿಜವಾದ ಮಾನವೀಯ ಲಕ್ಷಣ ಅದಕ್ಕಾಗಿ ಸಂಘದ ಅವಶ್ಯಕತೆ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯಿತಿಯ ಪತ್ರಕರ್ತರ ಭವನದಲ್ಲಿ ದಿವಂಗತ ಫಯಾಜ್ ವುಲ್ಲಾ ಅವರ ಕುಟುಂಬಕ್ಕೆ ಧನಸಹಾಯ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ ನಂತರ ಹಲವಾರು ಯೋಜನೆಗಳನ್ನು ಪತ್ರಕರ್ತರ ಪರವಾಗಿ ಜಾರಿಗೆ ತಂದಿದ್ದೇವೆ. ಕೊರೋನಾ ಸಂದರ್ಭದಲ್ಲೂ ಕೂಡ ಪತ್ರಕರ್ತರು ಬೀದಿಗಿಳಿದು ತಮ್ಮ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಇರುವುದರಿಂದ ಕೂಡ ಅವರು ಕೂಡ ಕೊರೋನಾ ವಾರಿಯರ್ಸ್ಗಳು.
ಪತ್ರಕರ್ತರು ಮೃತರಾದ ಸಂದರ್ಭದಲ್ಲಿ ಸರ್ಕಾರ ಐದು ಲಕ್ಷಗಳ ಪರಿಹಾರವನ್ನು ನೀಡುವ ಮಾನವೀಯತೆ ಮೆರೆದಿದ್ದು ಇದು ನಮ್ಮ ಸಂಘದ ಒಂದು ಸಾಧನೆ ಎಂದರು.
ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ಮಣಿಪಾಲ್ ಆಸ್ಪತ್ರೆ ಸಹಯೋಗದೊಂದಿಗೆ ಶೇ ಇಪ್ಪತ್ತರ ಕಡಿತದಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಈಗಾಗಲೇ ಕಾರ್ಡ್ಗಳನ್ನು ವಿತರಿಸಲಾಗಿದೆ ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಯನ್ನು ಇದಕ್ಕೆ ಜೊತೆ ಗೂಡಿಸುತ್ತೇವೆ ಎಂದರು.
ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಚೀನಿ ಪುರುಷೋತ್ತಮ್ ಮಾತನಾಡಿ ತುಮಕೂರು ಘಟಕದ ವತಿಯಿಂದ ವಿಮಾ ಯೋಜನೆಯನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರುವ ಪ್ರಯತ್ನದಲ್ಲಿದ್ದೇವೆ.
ನಿವೇಶನರಹಿತ ಪತ್ರಕರ್ತರಿಗೆ ನಿವೇಶನಗಳನ್ನು ಒದಗಿಸುವ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆಯಿಂದ ಒಂದು ಕೋಟಿ ರೂಗಳನ್ನು ಕಾಯ್ದಿರಿಸಿದ್ದೇವೆ ಮುಂದಿನ ದಿನಗಳಲ್ಲಿ ಅದರ ಬಗ್ಗೆ ಕ್ರಮ ವಹಿಸಿ ಪತ್ರಕರ್ತರಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ದಿವಂಗತ ಫಯಾಜ್ ಅವರ ಕುಟುಂಬಕ್ಕೆ ಸಹಾಯಧನ ನೀಡಲಾಯಿತು. ತಾಲ್ಲೂಕಿನ ಎಲ್ಲ ಪತ್ರಕರ್ತರು ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಇದ್ದರು.