ಚಿಕ್ಕನಾಯಕನಹಳ್ಳಿ: ಕೊರೋನಾ ವಾರಿಯರ್ಸ್ಗಳಾಗಿ ದುಡಿದಿರುವ ಕಾರ್ಯಕರ್ತರಿಗೆ ಸನ್ಮಾನಗಳು ಬೇಡ ಭತ್ಯೆನೀಡಿ ಎಂದು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕಾರ್ಮಿಕರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.
ತಾಲ್ಲೂಕಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ನೌಕರರ ಒಕ್ಕೂಟದಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸಿಲ್ದಾರ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ತಾಲ್ಲೂಕು ಅಧ್ಯಕ್ಷೆ ಪೂರ್ಣಮ್ಮ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಖ್ಖಿಸದೆ ಅಂಗನವಾಡಿ, ಆಶಾ ಹಾಗೂ ಗ್ರಾಮ ಪಂಚಾಯಿತಿ ನೌಕರರು ಸೇವೆ ಸಲ್ಲಿಸಿದ್ದರೂ ಅವರಿಗೆ ಈವರೆಗೂ ಯಾವುದೇ ಭತ್ಯೆ ನೀಡಿಲ್ಲ ಹಾಗೂ ಈ ಸಂದರ್ಭದಲ್ಲಿ ಸಾವನ್ನಪ್ಪಿದವರಿಗೆ ಯಾವುದೇ ಪರಿಹಾರ ನೀಡದೆ ಸರ್ಕಾರ ವಂಚಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತರುತ್ತಿರುವ ಹಲವು ವಿಧೇಯಕಗಳಿಂದ ಕಾರ್ಮಿಕರ ಹಕ್ಕು- ಭಾಧ್ಯತೆಗಳಿಗೆ ಚ್ಯುತಿಯುಂಟಾಗಲಿದೆ. ಒಕ್ಕೂಟಗಳ ಹೋರಾಟದ ಹಕ್ಕನ್ನು ಧಮನ ಮಾಡುವಂತಹ ತಿದ್ದುಪಡಿಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆತರಲಾಗುತ್ತಿದೆ. ಇಂತಹ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು, ಇಲಾಖೆಗಳ ಖಾಸಗೀಕರಣವನ್ನು ಕೈಬಿಡಬೇಕು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಾಪಸ್ ಪಡೆಯಬೇಕು, ಮುಂತಾದ ೧೫ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಕಾರ್ಯದರ್ಶಿ ಪುಷ್ಟಾವತಮ್ಮ ಮಾತನಾಡಿದರು.ಖಜಾಂಚಿ ಲತಾ, ಶಕುಂತಲಾ, ಸಕ್ಕೂಬಾಯಿ ಭಾಗವಹಿಸಿದ್ದರು.