ಶಿರಾ:ತಾಲ್ಲೂಕಿನ ದಂಡಿಕೆರೆ ಗ್ರಾಮದ ರೈತರ ಜಮೀನಿನಲ್ಲಿ ಮಾಹಿತಿ ನೀಡದೆ ಪೆಟ್ರೋಲ್ ಪೈಪ್ಲೈನ್ ಕಾಮಗಾರಿ ಮಾಡುತ್ತಿದ್ದು, ಅದನ್ನು ರೈತರು ವಿರೋಧಿಸಿದ ಕಾರಣ ಕಾಮಗಾರಿ ನಿಲ್ಲಿಸಲಾಗಿದೆ.
ಮಂಗಳೂರಿನಿಂದ ಆಂಧ್ರ ಪ್ರದೇಶದ ಚರ್ಲೆಪಲ್ಲಿ ಗ್ರಾಮಕ್ಕೆ ಪೈಪ್ ಲೈನ್ ಕಾಮಗಾರಿ ಮಾಡಲಾಗುತ್ತಿದೆ. ಪರಿಹಾರ ನೀಡದೆ ಕಾಮಗಾರಿ ನಡೆಸಬಾರದು ಎಂದು ರೈತರು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿ ವಾಪಸ್ ಹೋದರು.
ರೈತರಿಗೆ ಮಾಹಿತಿ ಇಲ್ಲ
ಕಾಮಗಾರಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಚಿತ್ರದುರ್ಗ ಜಿಲ್ಲೆಯ ಮಧ್ಯವರ್ತಿಯೊಬ್ಬರು ಪರಿಹಾರ ಕೊಡಿಸುವುದಾಗಿ ರೈತರಿಂದ ಪಹಣಿ ಮತ್ತು ಆಧಾರ್ ಕಾರ್ಡ್ಗಳನ್ನು ಸಂಗ್ರಹಿಸಿದ್ದರು. ರೈತರ ಸಭೆ ನಡೆಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ ಎಂದು ರೈತರು ಆರೋಪಿಸುತ್ತಾರೆ.
ಇದು ಕೇಂದ್ರ ಸರ್ಕಾರದ ಯೋಜನೆ. ಅಡ್ಡಿ ಮಾಡಿದರೆ ಗೋಲಿಬಾರ್ ನಡೆಸಿ ಕಾಮಗಾರಿ ಮುಂದುವರಿಸಲಾಗುವುದು’ ಎಂದು ಗುತ್ತಿಗೆದಾರರು ಬೆದರಿಸಿದ್ದಾರೆ. ಸುಮಾರು ಅರ್ಧ ಕಿ.ಮೀ ಜಮೀನಿನಲ್ಲಿದ್ದ ಶೇಂಗಾವನ್ನು ಜೆಸಿಬಿಯಿಂದ ಹಾಳು ಮಾಡಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ.