ನೆರೆ ಸಂತ್ರಸ್ತರ ದೇಣಿಗೆ ಹಸ್ತಾಂತರಿಸಿದ ಡಿಸಿಸಿ

ನೆರೆ ಸಂತ್ರಸ್ತರ ದೇಣಿಗೆ ಹಸ್ತಾಂತರಿಸಿದ ಡಿಸಿಸಿ

ತುಮಕೂರು:ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಹಾಗೂ ಕೊರೋನ ಸಂಕಷ್ಟದಲ್ಲಿರುವವರಿಗೆ ಕೆಪಿಸಿಸಿ ವಕ್ತಾರರಾದ ಮುರಳೀಧರ ಹಾಲಪ್ಪ ಅವರ ನೇತೃತ್ವದಲ್ಲಿ ತುಮಕೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಯ ವಿವಿಧ ಸಮಾಜದ ಮುಖಂಡರು, ರೈತ, ಯುವ ಹಾಗೂ ವಿದ್ಯಾರ್ಥಿ ಸಮೂಹ ಹಾಗೂ ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು, ವಾಹನ ಚಾಲಕರು ಮತ್ತಿತರರು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ನಿಯೋಗದಲ್ಲಿ ತೆರಳಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ದೇಣಿಗೆ ಸಲ್ಲಿಸಿ, ನಿಧಿ ಸಂಗ್ರಹಕ್ಕೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊರೋನ ಸಂಕಷ್ಟದಲ್ಲಿಯೂ ಇಂತಹ ಉದಾರ ಮನೋಭಾವ ತೋರಿ ತಮ್ಮ ಸಂಕಷ್ಟದಲ್ಲಿಯೂ ಇತರರ ಕಷ್ಟಕ್ಕೆ ನೆರವಾಗುವ ಮೂಲಕ ನಿಮ್ಮ ಕಷ್ಟಕ್ಕೆ ನಾವಿದ್ದೇವೆ ಎಂಬ ಧೈರ್ಯವನ್ನು ನೆರೆ ಸಂತ್ರಸ್ಥರು ಹಾಗೂ ಕೊರೋನ ಸಂಕಷ್ಟದಲ್ಲಿರುವವರಿಗೆ ತುಂಬಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಗ್ರಾಮೀಣ ಜನರ ಹಾಗೂ ಸಾಮಾನ್ಯ ಜನರ ರಕ್ಷಣೆಗಾಗಿ ನೂತನವಾಗಿ ಕಾಂಗ್ರೆಸ್ ಪಕ್ಷ ಆರಂಭಿಸಿರುವ “ಆರೋಗ್ಯ ಹಸ್ತ” ಅಭಿಯಾನ ಅತ್ಯಂತ ತುಂಬಾ ಯಶಸ್ವಿಯಾಗಿ ಕೆಪಿಸಿಸಿ ಆವರಣದಲ್ಲಿ ನಡೆದಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ರಾಜ್ಯದ ಜನಸಾಮಾನ್ಯರ ಕಷ್ಟಕ್ಕೆ ಸಮರೋಪಾದಿಯಲ್ಲಿ ಸ್ಪಂದಿಸುತ್ತಿದೆ ಎಂದರು.

ಜಿಲ್ಲೆಯ ಸವಿತ ಸಮಾಜ, ವಿಶ್ವಕರ್ಮ ಸಮಾಜ, ಸರ್ಕಾರಿ ನೌಕರರು, ಮಡಿವಾಳ ಜನಾಂಗ ಹಾಗೂ ತುಮಕೂರು ಹಾಗೂ ಇತರೆ ಜಿಲ್ಲೆಗಳ ರೈತರು, ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ವಾಹನ ಚಾಲಕರು ವಿವಿಧ ವೃತ್ತಿಪರರು, ಶ್ರಮಿಕ ವರ್ಗದವರು ಸ್ವಯಂಪ್ರೇರಿತರಾಗಿ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಮಳೆ ಹೆಚ್ಚುತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅವರ ಕಷ್ಟಕ್ಕೆ ಮಿಡಿದು, ಧ್ವನಿಗೂಡಿಸಿದ ಕಾಂಗ್ರೆಸ್ ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.

ಶಿವಕುಮಾರ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ದೇಣಿಗೆ ಸಲ್ಲಿಸಿ ನಿಧಿಸಂಗ್ರಹಕ್ಕೆ ಸಹಾಯ ಮಾಡಲಾಯಿತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ÷್ಯ ಹೋರಾಟಗಾರರಾದ ಟಿ.ಆರ್. ರೇವಣ್ಣ ಅವರು ನೆರೆ ಸಂತ್ರಸ್ತರಿಗೆ ದೇಣಿಗೆ ನೀಡುವ ಮೂಲಕ ಬೆಂಬಲ ಸೂಚಿಸಿದರು.

ರೈತರು ತಾವು ಬೆಳೆದ ಬೆಳೆಯನ್ನು ನೆರೆ ಸಂತ್ರಸ್ಥರು ಹಾಗೂ ಕೊರೋನ ಸಂಕಷ್ಟದಲ್ಲಿರುವವರಿಗೆ ನೀಡಲು ಕೆಪಿಸಿಸಿ ಕಚೇರಿಯಲ್ಲಿ ನೀಡಿ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ರೇವಣಸಿದ್ಧಯ್ಯ, ಉಪಾಧ್ಯಕ್ಷೆ ಮರಿಚೆನ್ನಮ್ಮ, ಮುಖಂಡರಾದ ಸುಮಂತ್, ಎಪಿಎಂಸಿ ಮಾಜಿ ಸದಸ್ಯರು ಹಾಗೂ ವರ್ತಕರಾದ ಯದು, ನಟರಾಜಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos