ಬೆಂಗಳೂರು, ಜ. 31 : ನಗರದ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 50 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಇದರಲ್ಲಿ ಮೂವರು ಕ್ರಿಶ್ಚಿಯನ್, ಮುಸ್ಲಿಂ ಮತ್ತು ವಿಶೇಷಚೇತನ ಜೋಡಿಗಳು ವೈವಾಹಿಕ ಬಂಧನಕ್ಕೆ ಒಳಗಾಗಿದ್ದು ವಿಶೇಷವಾಗಿತ್ತು.
ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯು ಏರ್ಪಡಿಸಿದ್ದ 21ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಜಾತಿ, ಮತ, ಧರ್ಮದ ಭೇದ-ಭಾವವಿಲ್ಲದೆ ಹಲವರು ವಿವಾಹ ಬಂಧನಕ್ಕೊಳಗಾದರು. ಆ ಮೂಲಕ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ಸಾರಲಾಯಿತು. ಕ್ರಿಶ್ಚಿಯನ್ ಸಮುದಾಯದ ವಧು-ವರರು ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಹಾಗೆಯೇ, ಲಿಂಗಾಯತ ಜನಾಂಗದ ಅಭಿಷೇಕ ಶಿವ ಸಿಂಪಿಗೇರ ಅವರು ಮುಸ್ಲಿಂ ಸಮುದಾಯದ ಬಿ.ವಿ.ಫಾತಿಮಾ ಅವರನ್ನು ಹಿಂದೂ ಸಂಪ್ರದಾಯದಂತೆ ವರಿಸಿದರು. ದೃಷ್ಟಿ ವಿಶೇಷಚೇತನ ಯುವಕ ಮತ್ತು ವಿಶೇಷಚೇತನ ಯುವತಿಯು ಬಾಳ ಸಂಗಾತಿಗಳಾಗುವ ಮೂಲಕ ಇತರರಿಗೆ ಮಾದರಿಯಾದರು.