ಭೋಪಾಲ್, ಜ.1 : ದೇಶದಲ್ಲಿ ವನರಾಜ ಹುಲಿಗಳ ಸಂತತಿ ಅಭಿವೃದ್ಧಿಯಾಗುತ್ತಿದ್ದರೂ ಇನ್ನೊಂದೆಡೆ ವಿವಿಧ ಕಾರಣಗಳಿಗಾಗಿ ವ್ಯಾಘ್ರಗಳು ಸಾವಿಗೀಡಾಗುತ್ತಿರುವುದು ಪರಿಸರ ವಾದಿಗಳು ಮತ್ತು ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. 2019ರ ಹುಲಿ ಗಣತಿಯಲ್ಲಿ ಈ ಬಾರಿ ದೇಶದಲ್ಲಿ ಒಟ್ಟು 81 ಹುಲಿಗಳು ಸಾವನ್ನಪ್ಪಿದ್ದು, ಮಧ್ಯಪ್ರದೇಶದಲ್ಲಿ ಗರಿಷ್ಠ ಅಂದರೆ 27 ಹುಲಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. 2019ರ ಹುಲಿ ಗಣತಿಯಲ್ಲಿ ಅತಿ ಹೆಚ್ಚು ಹುಲಿಗಳು ಇರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಧ್ಯಪ್ರದೇಶದಲ್ಲಿ 2019ರಲ್ಲಿ 23 ಹುಲಿಗಳು ವಿವಿಧ ಕಾರಣಗಳಿಂದ ಸಾವಿಗೀಡಾಗಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ. ಈ ವರ್ಷ ದೇಶದಲ್ಲಿ ಒಟ್ಟಾರೆ 81 ಹುಲಿಗಳು ಮೃತಪಟ್ಟಿವೆ. ಅದರಲ್ಲಿ ಮಧ್ಯಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದೆ. 2018ರಲ್ಲಿ ದೇಶದಲ್ಲಿ ಒಟ್ಟು 94 ಹುಲಿಗಳು ಮೃತಪಟ್ಟಿದ್ದವು.
ಈ ಕಾರಣದಿಂದ ಮಧ್ಯಪ್ರದೇಶಕ್ಕೆ ಹುಲಿ ರಾಜ್ಯ ಎಂಬ ಬಿರುದು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ಸದ್ಯ ಎರಡನೇ ಸ್ಥಾನದಲ್ಲಿದೆ. ಆದರೆ ಕರ್ನಾಟಕದಲ್ಲೂ ಈ ವರ್ಷ 12 ಹುಲಿಗಳು ಸಾವನ್ನಪ್ಪಿವೆ. ಪ್ರಸ್ತುತ ಕರ್ನಾಟಕದಲ್ಲಿ 524 ಹುಲಿಗಳಿದ್ದು, ಮಧ್ಯ ಪ್ರದೇಶದಲ್ಲಿ 526 ಹುಲಿಗಳಿವೆ.
ಕಳೆದ 8 ವರ್ಷಗಳಲ್ಲಿ169 ಹುಲಿಗಳ ಸಾವು: ಇನ್ನು 2012ರಿಂದ 2018ರವರೆಗೂ ಮಧ್ಯಪ್ರದೇಶದಲ್ಲಿ ಒಟ್ಟು 169 ಹುಲಿಗಳು ಸಾವನ್ನಪ್ಪಿವೆ, ದೇಶದಲ್ಲಿ ಒಟ್ಟಾರೆ 655 ಹುಲಿಗಳು ಸಾವನ್ನಪ್ಪಿವೆ. ಈ ವರ್ಷ 27 ಹುಲಿಗಳು ಸಾವನ್ನಪ್ಪಿದ್ದು, ಆ ಮೂಲಕ ಮಧ್ಯ ಪ್ರದೇಶದಲ್ಲಿ ಸಾವನ್ನಪ್ಪಿದ ಹುಲಿಗಳ ಸಂಖ್ಯೆ 169ಕ್ಕೇರಿದೆ.