ಬೆಂಗಳೂರು, ಡಿ. 28: ಕನಕಪುರ ಬಳಿಯ ಉಯ್ಯಂಬಳಿ ಸಮೀಪದ ಕಪಾಲಬೆಟ್ಟದಲ್ಲಿ ಏಸುವಿನ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ ನಡೆಸಿದ್ದು, ಜಮೀನು ಕುರಿತು ವಿವಾದ ತಾರಕ್ಕೇರಿದೆ. ಬಿಜೆಪಿ ನಾಯಕರು ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಇಂದು ಟ್ವೀಟ್ ಮಾಡಿ ಡಿ.ಕೆ.ಶಿವಕುಮಾರ್ ಅವರನ್ನು ಕುಟುಕಿದ್ದಾರೆ.
ಇಂದು ಟ್ವೀಟ್ ಮಾಡಿರುವ ವಿಜಯೇಂದ್ರ, ‘ಕಪಾಲಬೆಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಓಲೈಕೆ ಅಸ್ತವಾಗಿ ಏಸುವನ್ನು ಬಳಸಿಕೊಳ್ಳುತ್ತಿರುವ ಡಿಕೆಶಿ ನಡೆ ಸರಿಯಿಲ್ಲ. ಡಿಕೆಶಿಯವರ ಈ ನಡೆಯಿಂದ ನಮ್ಮ ನಾಡಿನ ಸಂಸ್ಕೃತಿ, ಇತಿಹಾಸಕ್ಕೆ ಅಪಚಾರವಾಗಿದೆ. ಯಾವುದೇ ಸ್ಥಳ ಮಹಿಮೆಯ ಹಿನ್ನೆಲೆಯಲ್ಲಿ ಪ್ರತಿಮೆ, ಸ್ಮಾರಕಗಳ ನಿರ್ಮಾಣವಾಗುತ್ತದೆ. ಆದರೆ, ಏಷ್ಯಾದಲ್ಲೇ ಎತ್ತರದ ಏಸು ಪ್ರತಿಮೆ ನಿರ್ಮಾಣ ಮಾಡುತ್ತಿರುವ ಡಿಕೆಶಿಯವರು ಆ ಸ್ಥಳ ಮಹಿಮೆ ಹಿನ್ನೆಲೆ ಏನೆಂದು ತಿಳಿಸಬೇಕಿದೆ’ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.
ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ್ದು, ‘ ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಕುಳಿತುಕೊಳ್ಳಲು ಡಿಕೆಶಿ ಹೈಕಮಾಂಡ್ ಓಲೈಸಬೇಕೇ.? ಕೆಂಪೇಗೌಡರ ನೆಲದ ಹೆಗ್ಗಳಿಕೆಯ ಇತಿಹಾಸದ ಮೇಲೆ ಅಟ್ಟಹಾಸ ಮೆರೆದು ಕನ್ನಡ ನಾಡಿನ ವೈಭವದ ಸಂಸ್ಕೃತಿ ಗೆ ಧಕ್ಕೆತರುವ ಪ್ರಮಾದವನ್ನು ಡಿಕೆಶಿ ಮಾಡುತ್ತಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಬೆನ್ನು ತಟ್ಟಬಹುದು. ಆದರೆ ಜನತೆ ನಿಮ್ಮನ್ನು ಕ್ಷಮಿಸುವರೇ..? ‘ ಎಂದು ಕಾಲೆಳೆದಿದ್ದಾರೆ.