ಪ್ಲೀಸ್ ಸಿಪ್ಪೆ ಬಿಸಾಡ ಬೇಡಿ..!

ಪ್ಲೀಸ್ ಸಿಪ್ಪೆ ಬಿಸಾಡ ಬೇಡಿ..!

ಡಿ. 24 : ಕೆಲವರು ಈ ಸಿಪ್ಪೆಯ ಮೇಲೆ ಅಂಟಿಕೊಂಡಿದ್ದ ಅಂಟು ಅಥವಾ ಇತರ ಕೊಳೆಗಳಿದ್ದರೆ ಇದನ್ನು ನೋಡಲಿಕ್ಕೇ ಇಷ್ಟಪಡುವುದಿಲ್ಲ, ಇನ್ನು ತಿನ್ನುವ ಮಾತಂತೂ ದೂರವೇ ಉಳಿಯಿತು. ವಾಸ್ತವದಲ್ಲಿ, ನಿಸರ್ಗ ಹಣ್ಣಿನ ತಿರುಳಿನಲ್ಲಿ ಏನೆಲ್ಲಾ ಪೋಷಕಾಂಶಗಳನ್ನಿರಿಸಿದೆಯೋ ಅದಕ್ಕೂ ಭಿನ್ನವಾದ ಪೋಷಕಾಂಶಗಳನ್ನು ಸಿಪ್ಪೆಯಲ್ಲಿರಿಸಿದೆ. ಅಷ್ಟಕ್ಕೂ ಈ ಸಿಪ್ಪೆ, ಹಣ್ಣು ಮಿಡಿಯಾಗಿದ್ದಿನಿಂದಲೂ ಬಲಿತು ಹಣ್ಣಾಗುವವರೆಗೆ ಹೊರಗಿನ ವಾತಾವರಣದಿಂದ ಒಳಗಿನ ಬೀಜ ಮತ್ತು ತಿರುಳನ್ನು ಫೋಷಿಸಿಕೊಂಡು ಬಂದಿದೆ. ಹಣ್ಣಾದ ಬಳಿಕವೂ ಇದು ತಿರುಳಿಗಿಂತ ಹೆಚ್ಚು ದೃಢವಾಗಿದೆ ಎಂದರೆ ತಿರುಳಿನಲ್ಲಿ ಇಲ್ಲದ ಅಂಶ ಇದರಲ್ಲಿದೆ ಎಂಬುದು ಸ್ಪಷ್ಟವಲ್ಲವೇ?
ಸಿಪ್ಪೆಯಲ್ಲಿ ಇರುವ ಅಂಶವೆಂದರೆ ಕರಗದ ನಾರು. ಈ ನಾರಿನಂಶ ದಿಂದಲೇ ಸಿಪ್ಪೆಗೆ ಹೆಚ್ಚು ಕಹಿ ರುಚಿ ಇರುತ್ತದೆ. ಇದರ ಜೊತೆಗೇ ಇತರ ಪೋಷಕಾಂಶಗಳು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಲು, ರಕ್ತದೊತ್ತಡ ನಿಯಂತ್ರಿಸಲು, ಕಣ್ಣಿನ ದೃಷ್ಟಿ ಉತ್ತಮಗೊಳಿಸಲು ಮೊದಲಾದ ಕೆಲವಾರು ಕ್ರಿಯೆಗಳಿಗೆ ನೆರವಾಗುತ್ತವೆ. ಕೆಲವು ಸಿಪ್ಪೆಗಳನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಉದಾಹರಣೆಗೆ ಹಲಸಿನ ಹಣ್ಣು, ಕಿತ್ತಳೆ, ಬಾಳೆಹಣ್ಣು, ನೀರುಳ್ಳಿ ಇತ್ಯಾದಿ. ಆದರೆ ವಾಸ್ತವದಲ್ಲಿ, ಇವು ಸಹಾ ಸೇವನೆಗೆ ಯೋಗ್ಯವಾಗಿದ್ದು
ಕಿತ್ತಳೆ : ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ತ್ವಚೆಯನ್ನು ಸ್ವಚ್ಛಗೊಳಿಸುವ ಕೆಲವಾರು ಅಂಶಗಳಿವೆ ಹಾಗೂ ಇವು ಮೊಡವೆ, ಬ್ಲಾಕ್ ಹೆಡ್, ಸತ್ತ ಜೀವಕೋಶಗಳನ್ನು ನಿವಾರಿಸುವುದು, ಚರ್ಮದ ಕಲೆಗಳನ್ನು ತಿಳಿಗೊಳಿಸುವುದು, ತ್ವಚೆಗೆ ಅಗತ್ಯವಾದ ಆರ್ದ್ರತೆಯನ್ನು ನೀಡುವುದು, ಚರ್ಮದ ಕಾಂತಿಯನ್ನು ಹೆಚ್ಚಿಸುವುದು ಮೊದಲಾದ ಗುಣಗಳನ್ನು ಹೊಂದಿದೆ. ಇದಕ್ಕಾಗಿ ಕಿತ್ತಳೆಯ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಬಾಟಲಿಯೊಂದರಲ್ಲಿ ಸಂಗ್ರಹಿಸಿಡಿ. ಅಗತ್ಯವಾದಾಗ ಈ ಪುಡಿಯನ್ನು ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ತಲೆಹೊಟ್ಟು ಇದ್ದರೆ ಈ ಪುಡಿಯನ್ನು ನೀರಿನಲ್ಲಿ ಕಲಸಿ ಕೂದಲಿಗೆ ದಪ್ಪನಾಗಿ ಹಚ್ಚಿಕೊಂಡು ಕೊಂಚ ಹೊತ್ತು ಬಿಟ್ಟು ಸ್ನಾನ ಮಾಡಿ. ಅಜೀರ್ಣತೆ ಇದ್ದರೆ ಈ ಪುಡಿಯನ್ನು ಊಟದ ಬಳಿಕ ಕೊಂಚ ನೀರಿನಲ್ಲಿ ಬೆರೆಸಿ ಕುಡಿಯಿರಿ.

ಕಲ್ಲಂಗಡಿ : ಬೇಸಿಗೆಯಲ್ಲಿ ಬಿಸಿಲಿನ ಧಗೆಯಿಂದ ಬಳಲಿರುವ ದೇಹಕ್ಕೆ ಚೈತನ್ಯ ನೀಡುವ ಈ ಹಣ್ಣು ಬಹುತೇಕ ನೀರಿನಂಶದಿಂದಲೇ ಕೂಡಿದೆ. ಒಳಭಾಗ ಕೆಂಪಗಿದ್ದು ಸಿಹಿಯಾಗಿದ್ದರೆ ಅಂಚಿನಲ್ಲಿರುವ ಬಿಳಿಭಾಗ ಮತ್ತು ಗಟ್ಟಿಯಾಗಿರುವ ಹೊರಸಿಪ್ಪೆಯನ್ನು ಸಾಮಾನ್ಯವಾಗಿ ನಾವೆಲ್ಲಾ ಎಸೆಯುತ್ತೇವೆ. ವಾಸ್ತವದಲ್ಲಿ, ಈ ಬಿಳಿಭಾಗದಲ್ಲಿ ಸತು, ಪೊಟ್ಯಾಶಿಯಂ, ಮೆಗ್ನೀಶಿಯಂ, ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಎ ಮತ್ತು ಸಿ ಹೇರಳವಾಗಿವೆ. ಅಲ್ಲದೇ ಇದರಲ್ಲಿ ಕರಗುವ ನಾರು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಜೀರ್ಣಕ್ರಿಯೆಯಲ್ಲಿಯೂ ಇದು ನೆರವಾಗುತ್ತದೆ ಹಾಗೂ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಸಹಕರಿಸುತ್ತದೆ. ಕಲ್ಲಗಡಿಯ ಅತಿ ಹೊರಗಿನ ಪದರ ಬಹುತೇಕ ಗಡಸು ಸೆಲ್ಯುಲ್ಯೋಸ್ ಎಂಬ ನಾರಿನಂಶವನ್ನು ಹೊಂದಿದ್ದು ಇದನ್ನು ಸೇವಿಸುವುದು ತರವಲ್ಲ. ಹಾಗಾಗಿ ಇದನ್ನು ನಿವಾರಿಸಿ, ಕೆಂಪುಭಾಗದ ಬಳಿಕ ಮತ್ತು ಸಿಪ್ಪೆಯ ಅಡಿ ಇರುವ ಬಿಳಿಭಾಗವನ್ನು ಸಂಗ್ರಹಿಸಿ ತುರಿದು ನಿಮ್ಮ ನೆಚ್ಚಿನ ತಿಂಡಿಗಳನ್ನು ಅಥವಾ ತರಕಾರಿಗಳ ಬದಲಿಗೆ ಬಳಸಬಹುದು. ಅದರಲ್ಲೂ ಈ ತುರಿಯಿಂದ ತಯಾರಿಸಿದ ಸಿಹಿಖಾದ್ಯ ಆಗ್ರಾದ ಪೇಠಾ ಎಂಬ ತಿಂಡಿಯನ್ನೇ ಹೋಲುತ್ತದೆ.

ಆಲೂಡ್ಡೆ

ಸಾಮಾನ್ಯವಾಗಿ ಆಲುಗಡ್ಡೆಯನ್ನು ಬೇಯಿಸಿದ ಬಳಿಕ ಅಥವಾ ಬೇಯಿಸುವ ಮುನ್ನ, ಸಿಪ್ಪೆಯಂತೂ ನಿವಾರಿಸಲಾಗುತ್ತದೆ. ಕೆಲವರಿಗೆ ಮಾತ್ರವೇ ಇದರಲ್ಲಿರುವ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್ನು ಗಳು ಮತ್ತು ವಿಶೇಷವಾಗಿ ಮೆಗ್ನೀಸಿಯಂ ಬಗ್ಗೆ ಅರಿವಿದೆ. ಇವೆಲ್ಲವೂ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲೂ ನೆರವಾಗುತ್ತದೆ. ಈ ಸಿಪ್ಪೆ ಉತ್ತಮ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ದೇಹದಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಮೂಲಕ ತ್ವಚೆಯನ್ನು ಸ್ವಚ್ಛವಾಗಿರಿಸಲು ನೆರವಾಗುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ನಿಂದಲೂ ರಕ್ಷಣೆ ಒದಗಿಸುತ್ತದೆ. ಇನ್ನು ಮುಂದೆ ಸಾಂಬಾರ್ ಮಾಡುವಾಗ ಆಲುಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆಸಹಿತವೇ ಕತ್ತರಿಸಿ ಬೇಯಿಸಿ.

ದಾಳಿಂಬೆ

ದಾಳಿಂಬೆಯ ಒಳಗಿನ ಕೆಂಪು ಕೆಂಪಾದ ಹೊಳೆಯುವ ಕಾಳುಗಳು ಎಷ್ಟು ರುಚಿಕರವೋ ಇದರ ಸಿಪ್ಪೆ ಮತ್ತು ಒಳಗಿನ ಕಾಳುಗಳನ್ನು ಆವರಿಸಿರುವ ತೆಳುವಾದ ಪೊರೆ ಮತ್ತು ಕಾಳುಗಳನ್ನು ಹಿಡಿದುಕೊಂಡಿರುವ ಬುಡದ ಭಾಗ, ಇವೆಲ್ಲವೂ ಅತ್ಯಂತ ಕಹಿ. ಆದರೆ ಈ ಕಹಿಯಲ್ಲಿಯೇ ಅತ್ಯಂತ ಆರೋಗ್ಯಕರ ಗುಣವೂ ಅಡಗಿದೆ. ಅದೆಂದರೆ ದೇಹದಿಂದ ಹೃದಯಕ್ಕೆ ಅಪಾಯವನ್ನು ನೀಡುವ ಕಲ್ಮಶಗಳನ್ನು ನಿವಾರಿಸುವುದು. ಅಲ್ಲದೇ ಇದರ ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಗುಣ ಗಂಟಲ ಬೇನೆ ಮತ್ತು ಶೀತ ಕೆಮ್ಮಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಕೆಮ್ಮು ಶೀತ ನೆಗಡಿಯನ್ನು ಶೀಘ್ರವೇ ಗುಣಪಡಿಸುತ್ತದೆ. ಇದಕ್ಕಾಗಿ, ದಾಳಿಂಬೆ ಸಿಪ್ಪೆಯನ್ನು ಕೊಂಚ ನೀರಿನೊಂದಿಗೆ ಅರೆದು ಈ ನೀರನ್ನು ಉಗುರುಬೆಚ್ಚಗಾಗಿಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದು ಹಾಗೂ ಗಳಗಳ ಮಾಡಬೇಕು. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆರಡು ಬಾರಿ ಮಾಡಿದರೆ ಸಾಕು. ಅಷ್ಟೇ ಅಲ್ಲ, ಈ ಸಿಪ್ಪೆಯನ್ನು ಅರೆದು ತಯಾರಿಸಿದ ಲೇಪನವನ್ನು ಹಚ್ಚಿಕೊಳ್ಳುವ ಮೂಲಕ ಚರ್ಮಕ್ಕೆ ತೇವಕಾರಕ ಅಥವಾ ಮಾಯಿಶ್ಚರೈಸರ್ ನಂತೆಯೂ ಬಳಸಬಹುದು. ಅಲ್ಲದೇ ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಣೆಯನ್ನೂ ಪಡೆಯಬಹುದು.

ಫ್ರೆಶ್ ನ್ಯೂಸ್

Latest Posts

Featured Videos