ಕಟಕ್, ಡಿ. 23 : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 56 ರನ್ ಗಳಿಸಿ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜಾಕ್ ಕಾಲಿಸ್ ಅವರನ್ನು ಏಕದಿನ ಕ್ರಿಕೆಟ್ ನಲ್ಲಿ ಹಿಂದಿಕ್ಕಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಈಗ 7ನೇ ಸ್ಥಾನಕ್ಕೆ ಏರಿದ್ದಾರೆ. ಜಾಕ್ ಕಾಲಿಸ್ ಅವರು 328 ಏಕದಿನ ಪಂದ್ಯಗಳ 314 ಇನ್ನಿಂಗ್ಸ್ ಗಳಿಂದ 11,579 ರನ್ ಗಳಿಸಿದರೆ, 31 ವರ್ಷದ ಕೊಹ್ಲಿ 242 ಪಂದ್ಯಗಳ 233 ಇನ್ನಿಂಗ್ಸ್ ಆಡಿ 11,609 ರನ್ ಹೊಡೆದಿದ್ದಾರೆ.
ಪಟ್ಟಿಯಲ್ಲಿ 463 ಪಂದ್ಯ ಆಡಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, 452 ಇನ್ನಿಂಗ್ಸ್ ಗಳಿಂದ 18,426 ರನ್ ಹೊಡೆದಿದ್ದಾರೆ. ಉಳಿದಂತೆ ನಂತರದ ಸ್ಥಾನದಲ್ಲಿ ಅನುಕ್ರಮವಾಗಿ ಶ್ರೀಲಂಕಾದ ಕುಮಾರ ಸಂಗಕ್ಕಾರ (14,234 ರನ್), ಆಸ್ಟ್ರೇಲಿಯಾ ಮಾಜಿ ನಾಯಕ ರಿಕ್ಕಿ ಪಾಟಿಂಗ್(13,704 ರನ್), ಶ್ರೀಲಂಕಾದ ಸನತ್ ಜಯಸೂರ್ಯ(13,430 ರನ್), ಮಹೇಲಾ ಜಯವರ್ಧನೆ(12,650 ರನ್), ಪಾಕಿಸ್ತಾನದ ಇಂಜಮಾಮ್ ಉಲ್ ಹಕ್(11,609 ರನ್) ಹೊಡೆದಿದ್ದಾರೆ. 9ನೇ ಸ್ಥಾನದಲ್ಲಿ ಸೌರವ್ ಗಂಗೂಲಿ(11,363 ರನ್), 10ನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್(10,889 ರನ್) ಹೊಡೆದಿದ್ದಾರೆ.