ಬೆಂಗಳೂರು, ಡಿ. 20: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿ ಕಾಲಿಗೆ ಸಂಪಿಗೆಹಳ್ಳಿ ಠಾಣೆ ಇನ್ಸ್ಪೆಕ್ಟರ್ ಗುಂಡು ಹಾರಿಸಿ ಬಂಧಿಸಿದ್ದಾರೆ.
ಸಂಪಿಗೆಹಳ್ಳಿ ನಿವಾಸಿ ರೌಡಿಶೀಟರ್ ರಾಹುಲ್ ಗುಂಡೇಟು ತಿಂದ ಆರೋಪಿ. ಘಟನೆಯಲ್ಲಿ ಹೆಡ್ಕಾನ್ಸ್ಟೇಬಲ್ ಮಹೇಶ್, ಕಾನ್ಸ್ಟೇಬಲ್ ಗಳಾದ ರಾಜು ಕಲಾಲ್ ಮತ್ತು ಪುರುಷೋತ್ತಮ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.
ರಾಹುಲ್ ತನ್ನ ಸಹಚರರಾದ ಹೇಮಂತ್ ಮತ್ತು ಲೋಕೇಶ್ ಜತೆ ಸೇರಿ ಡಿ.16ರಂದು ರೌಡಿಶೀಟರ್ ಭರತ್ ಅಲಿಯಾಸ್ ಕೋಗಿಲು ಭರತ್ ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಆರೋಪಿಗಳ ಪತ್ತೆಗೆ ಸಂಪಿಗೆಹಳ್ಳಿ ಠಾಣೆ ಇನ್ಸ್ಪೆಕ್ಟರ್ ನಂದಕುಮಾರ್ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿತ್ತು. ಘಟನೆ ಸಂಬಂಧ ಮೊದಲಿಗೆ ಹೇಮಂತ್ ಮತ್ತು ಲೋಕೇಶ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ರಾಹುಲ್ ಬಗ್ಗೆ ಮಾಹಿತಿ ನೀಡಿದ್ದರು.
ಆರೋಪಿ ರಾಹುಲ್ ಹುಣಸಮಾರನಹಳ್ಳಿ ಮಾರ್ಗವಾಗಿ ಹೋಗುತ್ತಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ನಂದಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದ.
ಕೂಡಲೇ ಹೆಡ್ಕಾನ್ಸ್ಟೇಬಲ್ ಮಹೇಶ್, ಕಾನ್ಸ್ಟೇಬಲ್ಗಳಾದ ರಾಜು ಮತ್ತು ಪುರುಷೋತ್ತಮ್ ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದರು. ಈ ವೇಳೆ ಆರೋಪಿ ಮಾರಕಾಸ್ತ್ರದಿಂದ ಪೊಲೀಸರಿಗೆ ಇರಿದು ಪರಾರಿಯಾಗಲು ಯತ್ನಿಸಿದ್ದ. ಇನ್ಸ್ಪೆಕ್ಟರ್ ನಂದಕುಮಾರ್ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಆದರೂ, ಆರೋಪಿ ಸುಮ್ಮನಾಗದೆ ಹಲ್ಲೆ ಮುಂದುವರೆಸಿದಾಗ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು